ಬೆಂಗಳೂರು, ಡಿ.17: ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು, ಕರಾವಳಿ ಪ್ರದೇಶದ ಗ್ರಾಮೀಣ ನಾಗರಿಕರು ಭೂ ಅಭಿವೃದ್ಧಿ ಹಾಗೂ ಕಟ್ಟಡ ಲೈಸೆನ್ಸ್ ಪಡೆಯುವ ವೇಳೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಸದನದ ಗಮನ ಸೆಳೆದರು.




ಶಾಸಕರು ಮಾತನಾಡಿ, ಕರಾವಳಿ ಗ್ರಾಮೀಣ ಭಾಗದ ಸಾಮಾನ್ಯ ನಾಗರಿಕನು ತನ್ನ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಲು ಮುಂದಾದಾಗ ಸರ್ಕಾರದ ವಿವಿಧ ಇಲಾಖೆಗಳ ಅನುಮೋದನೆ ಪ್ರಕ್ರಿಯೆಗಳು ಅತ್ಯಂತ ಜಟಿಲವಾಗಿವೆ ಎಂದು ತಿಳಿಸಿದರು. ಈ ಎಲ್ಲಾ ಪ್ರಕ್ರಿಯೆಗಳನ್ನು ಒಬ್ಬ ವ್ಯಕ್ತಿ ಸ್ವತಃ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಿದ್ದು, ಪರಿಣಾಮವಾಗಿ ನಾಗರಿಕರು ಮಧ್ಯವರ್ತಿಗಳ ಅವಲಂಬನೆಗೆ ಒಳಗಾಗುತ್ತಿದ್ದಾರೆ. ಇದರಿಂದ ಸಮಯ, ಹಣ ಹಾಗೂ ಮಾನಸಿಕ ಒತ್ತಡ ಹೆಚ್ಚುತ್ತಿದೆ ಎಂದು ಅವರು ಹೇಳಿದರು.


ಭೂ ಪರಿವರ್ತನೆಯಿಂದ ಹಿಡಿದು ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವವರೆಗೆ ಕನಿಷ್ಠ ಆರು ಇಲಾಖೆಗಳ ಬಳಿ ಸಾರ್ವಜನಿಕರು ಅಲೆದಾಡಬೇಕಾದ ಸ್ಥಿತಿ ಇದೆ ಎಂದು ಶಾಸಕರು ವಿವರಿಸಿದರು. 11-ಇ ನಕ್ಷೆಗೆ ಭೂಮಾಪನ, ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆ, ಭೂ ಪರಿವರ್ತನೆಗೆ ಕಂದಾಯ ಇಲಾಖೆ, ನಿವೇಶನ ವಿನ್ಯಾಸ ಅನುಮೋದನೆ ಹಾಗೂ ಕಟ್ಟಡ ನಕ್ಷೆಯ ತಾಂತ್ರಿಕ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಯ ಸ್ಥಳೀಯ ನಗರ ಯೋಜನಾ ಪ್ರಾಧಿಕಾರ, ನಮೂನೆ 11-ಎ, ಕಟ್ಟಡ ಪರವಾನಿಗೆ ಹಾಗೂ ಖಾತೆಗಾಗಿ ಗ್ರಾಮ ಪಂಚಾಯತ್, ಕಟ್ಟಡ ಸ್ವಾಧೀನ ಪ್ರಮಾಣ ಪತ್ರಕ್ಕಾಗಿ ಕಾರ್ಮಿಕ ಇಲಾಖೆ ಮತ್ತು ವಿದ್ಯುತ್ ಸಂಪರ್ಕಕ್ಕೆ ಮೆಸ್ಕಾಂ ಸೇರಿದಂತೆ ಅನೇಕ ಇಲಾಖೆಗಳ ಅನುಮತಿ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಎಲ್ಲ ಪ್ರಕ್ರಿಯೆಗಳನ್ನು ಸರಳಗೊಳಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕರಣ ಸಂಖ್ಯೆ 64(5)ಕ್ಕೆ ತಿದ್ದುಪಡಿ ತಂದು ಗ್ರಾಮಾಂತರ ಯೋಜನಾ ನಿಯಮ ಜಾರಿಗೆ ತರಬೇಕು. ಜೊತೆಗೆ ನಿವೇಶನದ ವಿನ್ಯಾಸ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಇದರಿಂದ ಗ್ರಾಮೀಣ ಜನರು ನಗರ, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸಮಯ ಮತ್ತು ವೆಚ್ಚವನ್ನು ಉಳಿತಾಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ಜನಪರ ಹಾಗೂ ಸುಧಾರಣಾತ್ಮಕ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಆಡಳಿತದ ವಿಕೇಂದ್ರೀಕರಣಕ್ಕೆ ಬಲ ಸಿಗುವುದರೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಷ್ಟು ಮೆರುಗು ಬರುತ್ತದೆ ಎಂದು ಕಿಶೋರ್ ಕುಮಾರ್ ಪುತ್ತೂರು ತಿಳಿಸಿದರು.


