ನೆಟ್ಟಣ: ಕಡಬ ತಾಲೂಕಿನ ನೆಟ್ಟಣದ ಸುಬ್ರಹ್ಮಣ್ಯ ರೋಡು ರೈಲು ನಿಲ್ದಾಣದಲ್ಲಿ ಬುಧವಾರ ಕಾಮಗಾರಿ ನಡೆಯುತ್ತಿದ್ದ ವೇಳೆ ಅಡಿಭಾಗ ಕುಸಿದು ಕ್ರೇನ್ ಒಂದು ನಿಯಂತ್ರಣ ತಪ್ಪಿ ರೈಲು ಹಳಿಗೆ ಉರುಳಿ ಬಿದ್ದ ಘಟನೆ ಸಂಭವಿಸಿದೆ.
ಸುಬ್ರಹ್ಮಣ್ಯ ರೋಡು ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರೇನ್ ಅಡಿಭಾಗ ಕುಸಿದ ಪರಿಣಾಮ ಹಳಿಯ ಮೇಲೆ ಅಡ್ಡಲಾಗಿ ಬಿದ್ದಿದೆ. ಘಟನೆಯಲ್ಲಿ ಕ್ರೇನ್ ಆಪರೇಟರ್‌ಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.




ಘಟನೆ ಬಳಿಕ ತಕ್ಷಣವೇ ಎರಡು ಕ್ರೇನ್‌ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ, ರೈಲು ಹಳಿಗೆ ಉರುಳಿ ಬಿದ್ದಿದ್ದ ಕ್ರೇನ್ ಅನ್ನು ಮೇಲಕ್ಕೆತ್ತಿ ತೆರವುಗೊಳಿಸಲಾಯಿತು. ನಿಲ್ದಾಣದಲ್ಲಿ ವಿದ್ಯುತ್ ಮಾರ್ಗ ಹಾದುಹೋಗುತ್ತಿದ್ದರೂ, ಘಟನಾ ಸಮಯದಲ್ಲಿ ಯಾವುದೇ ಪ್ರಯಾಣಿಕ ಅಥವಾ ಸರಕು ರೈಲು ನಿಲ್ದಾಣದಲ್ಲಿ ಇಲ್ಲದಿದ್ದುದರಿಂದ ಭಾರೀ ಅನಾಹುತ ತಪ್ಪಿದೆ.
ಘಟನೆ ಸಂಬಂಧ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ರೈಲು ಸಂಚಾರದಲ್ಲಿ ಯಾವುದೇ ದೀರ್ಘಕಾಲದ ವ್ಯತ್ಯಯ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




