ಬೆಂಗಳೂರು, ಡಿಸೆಂಬರ್ 17:
ರಾಜ್ಯದಲ್ಲಿ 15 ವರ್ಷ ಮೀರಿದ ಹಳೆಯ ವಾಹನಗಳಿಗೆ ಸರ್ಕಾರ ಶಾಕ್ ನೀಡಿದ್ದು, ಸ್ಕ್ರ್ಯಾಪ್ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ. ಈ ನೀತಿಯಂತೆ, 15 ವರ್ಷ ಮೀರಿದ ಹಳಿ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ (Fitness Certificate) ಪಡೆಯುವುದು ಕಡ್ಡಾಯವಾಗಿದ್ದು, ವಿಫಲವಾದ ವಾಹನಗಳನ್ನು ಗುಜರಿಗೆ ಹಾಕಬೇಕಾಗುತ್ತದೆ.

ಸರ್ಕಾರದ ನಿಯಮದಂತೆ, 15 ವರ್ಷ ಮೀರಿದ ವಾಹನಗಳು ಪ್ರತಿ ಐದು ವರ್ಷಕ್ಕೊಮ್ಮೆ ಫಿಟ್‌ನೆಸ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ವಾಹನ ಅರ್ಹತೆ ಕಳೆದುಕೊಂಡರೆ, ಅದನ್ನು ನೋಂದಣಿ ರದ್ದುಪಡಿಸಿ ಸ್ಕ್ರ್ಯಾಪ್‌ಗೆ ಕಳುಹಿಸಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಸುಮಾರು 1.38 ಕೋಟಿ ಹಳಿ ವಾಹನಗಳು ಇದ್ದು, ಇವುಗಳಲ್ಲಿ ಹೆಚ್ಚಿನವು ಪರೀಕ್ಷೆಗೆ ಒಳಪಡುವ ಸಾಧ್ಯತೆ ಇದೆ.

ವಿಶೇಷವಾಗಿ, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿಯಮ ಪಾಲಿಸದ ವಾಹನಗಳಿಗೆ ದಂಡ ವಿಧಿಸುವ ಜೊತೆಗೆ ನೋಂದಣಿ ನವೀಕರಣಕ್ಕೆ ಅವಕಾಶ ಇರುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಇನ್ನು 15 ವರ್ಷ ಮೀರಿದ ಬಸ್‌ಗಳು, ಲಾರಿಗಳು ಹಾಗೂ ವಾಣಿಜ್ಯ ವಾಹನಗಳು ಕಡ್ಡಾಯವಾಗಿ ಫಿಟ್‌ನೆಸ್ ಪರೀಕ್ಷೆ ಪಾಸಾಗಬೇಕು. ಪರೀಕ್ಷೆಯಲ್ಲಿ ವಿಫಲವಾದ ವಾಹನಗಳನ್ನು ಬಳಸುವುದಾದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕ್ರಮದಿಂದ ಹಳೆಯ ವಾಹನ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದರೂ, ಪರಿಸರ ರಕ್ಷಣೆ ಮತ್ತು ರಸ್ತೆ ಸುರಕ್ಷತೆ ದೃಷ್ಟಿಯಿಂದ ಇದು ಅಗತ್ಯ ಕ್ರಮವೆಂದು ಸರ್ಕಾರ ಹೇಳಿದೆ.

Leave a Reply

Your email address will not be published. Required fields are marked *