ಬೆಳಗಾವಿ: ಕಡಬ ತಾಲೂಕಿನಲ್ಲಿ ನೂತನ ಉಪನೋಂದಣಿ ಕಚೇರಿ ಪ್ರಾರಂಭಿಸಲು ಆರ್ಥಿಕ ಇಲಾಖೆಯ ಸಹಮತಿ ಪಡೆದು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ವಿಧಾನಸಭೆಯಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಡಬ ತಾಲೂಕಿನಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ ಇನ್ನೂ ಆರಂಭವಾಗಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ತಾಲೂಕುಗಳಲ್ಲಿ ಉಪನೋಂದಣಿ ಕಚೇರಿಗಳನ್ನು ಆರಂಭಿಸುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಅಗತ್ಯ ಅನುಮತಿ ದೊರೆತ ಬಳಿಕ ಕಡಬ ತಾಲೂಕಿಗೂ ಉಪನೋಂದಣಿ ಕಚೇರಿ ಆರಂಭಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.




ಕಡಬ ತಾಲೂಕು – ರಾಜಸ್ವ ಸಂಗ್ರಹ ವಿವರ:
2022–23: 3,898 ದಸ್ತಾವೇಜುಗಳು – ₹8.72 ಕೋಟಿ
2023–24: 3,589 ದಸ್ತಾವೇಜುಗಳು – ₹9.62 ಕೋಟಿ
2024–25: 3,521 ದಸ್ತಾವೇಜುಗಳು – ₹10.78 ಕೋಟಿ
2025–26 (ನವೆಂಬರ್ ಅಂತ್ಯಕ್ಕೆ): 2,454 ದಸ್ತಾವೇಜುಗಳು – ₹8.35 ಕೋಟಿ
ಕಡಬ ತಾಲೂಕಿನಲ್ಲಿ ಉತ್ತಮ ಪ್ರಮಾಣದ ರಾಜಸ್ವ ಸಂಗ್ರಹವಾಗುತ್ತಿರುವ ಹಿನ್ನೆಲೆಯಲ್ಲಿ ಉಪನೋಂದಣಿ ಕಚೇರಿ ಪ್ರಾರಂಭಿಸುವ ಅಗತ್ಯತೆ ಸ್ಪಷ್ಟವಾಗಿದ್ದು, ಶೀಘ್ರದಲ್ಲೇ ಈ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳುವ ವಿಶ್ವಾಸ ವ್ಯಕ್ತವಾಗಿದೆ.




