ಭಕ್ತಕೋಡಿಯ ಕಟ್ಟೆಯಲ್ಲಿದ್ದ ಭಗವತ್ ಧ್ವಜ ತೆರವು – ಹಿಂದೂ ಮುಖಂಡರ ಆಕ್ರೋಶ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಸಮೀಪದ ಭಕ್ತಕೋಡಿಯಲ್ಲಿ ಎಂಟು ವರ್ಷಗಳ ಹಿಂದಿನ ಕಟ್ಟೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಸ್ಥಳೀಯ ಯುವಕರು ಪರವಾನಗಿ ಇಲ್ಲದೆ ಕಟ್ಟೆಯ ಮೇಲೆ ಭಗವತ್ ಧ್ವಜ ಅಳವಡಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಂಡೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಧ್ವಜ ಸಹಿತ ಕಟ್ಟೆಯನ್ನು ತೆರವುಗೊಳಿಸಿದ್ದಾರೆ.

ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಅವರು ಭಗವತ್ ಧ್ವಜ ಅಳವಡಿಕೆಗೆ ಅನುಮತಿ ನೀಡಿದ್ದರು ಎನ್ನಲಾಗಿದ್ದರೂ, ಜನಪ್ರತಿನಿಧಿಗಳ ಒತ್ತಡದ ಹಿನ್ನೆಲೆಯಲ್ಲಿ ಪಂಚಾಯತ್ ಅಧಿಕಾರಿಗಳು ಪೊಲೀಸ್ ಸಮ್ಮುಖದಲ್ಲಿ ಕಟ್ಟೆ ತೆರವುಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕಟ್ಟೆ ನಿರ್ಮಾಣಕ್ಕೆ ಎಂಟು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿತ್ತು. 2017ರಲ್ಲಿ ಕಟ್ಟೆ ನಿರ್ಮಾಣದ ವಿಚಾರವಾಗಿ ಮಾತಿನ ಚಕಮಕಿ ನಡೆದ ಬಳಿಕ ಅಲ್ಲೊಂದು ತ್ರಿಕೋನಾಕಾರದ ಕಟ್ಟೆ ನಿರ್ಮಾಣವಾಗಿತ್ತು. ಬಸ್‌ಗಾಗಿ ಕಾಯುವ ಸಾರ್ವಜನಿಕರು ಈ ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಿದ್ದರು. ಧಾರ್ಮಿಕ ಕಾರ್ಯಕ್ರಮಗಳ ವೇಳೆ ಕಟ್ಟೆಗೆ ಬಂಟಿಂಗ್ಸ್‌ಗಳನ್ನು ಕೂಡ ಅಳವಡಿಸಲಾಗುತ್ತಿತ್ತು.

ಆದರೆ ಇತ್ತೀಚೆಗೆ ಭಗವತ್ ಧ್ವಜ ಅಳವಡಿಸಲಾಗಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕಟ್ಟೆಯನ್ನೇ ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಮುಂಡೂರು ಪಂಚಾಯತ್ ಅಧಿಕಾರಿಗಳು ಕಟ್ಟೆ ತೆರವುಗೊಳಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಕಟ್ಟೆ ಧ್ವಂಸಗೊಳಿಸಿದ ಕ್ರಮಕ್ಕೆ ಹಿಂದೂ ಪರ ಸಂಘಟನೆಗಳು ಮತ್ತು ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿದ್ದಾರೆ. ಕೂಡಲೇ ಕಟ್ಟೆ ಧ್ವಂಸಗೊಳಿಸಿದ ಸ್ಥಳದಲ್ಲೇ ಮರು ನಿರ್ಮಾಣ ಮಾಡಬೇಕು ಹಾಗೂ ಮುಂಡೂರು ಪಂಚಾಯತ್ ಮುಖಾಂತರವೇ ಕಟ್ಟೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸಿ ಹೋರಾಟ ನಡೆಸುವುದಾಗಿ ಹಿಂದೂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *