ಹೆಲ್ಮೆಟ್ ಧರಿಸಿದ ಇಬ್ಬರಿಂದ ದಾಳಿ – ಮಹಿಳೆಗೆ ಗಾಯ

ಪುತ್ತೂರು: ಪುತ್ತೂರು ತಾಲೂಕಿನ ಕೊಂಬಿಟ್ಟಿನಲ್ಲಿರುವ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ. ನಾರಾಯಣ ಅವರ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ ಘಟನೆ ಡಿಸೆಂಬರ್ 17ರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.

ಡಿಸೆಂಬರ್ 17ರಂದು ರಾತ್ರಿ ಊಟ ಮುಗಿಸಿ ಮನೆಯೊಳಗೆ ಕುಳಿತುಕೊಂಡಿದ್ದ ವೇಳೆ, ನಿವೃತ್ತ ಪ್ರಾಧ್ಯಾಪಕಿ ವತ್ಸಲ ರಾಜ್ ಅವರು ಒಬ್ಬರೇ ಮನೆಯಲ್ಲಿದ್ದರು. ಮನೆಯ ಮುಂಭಾಗದ ಬಾಗಿಲು ಮುಚ್ಚಲಾಗಿದ್ದು, ಹಿಂಬಾಗಿಲು ತೆರೆದಿದ್ದ ಸಮಯದಲ್ಲಿ ರಾತ್ರಿ ಸುಮಾರು 9.55ರ ವೇಳೆಗೆ ಹೆಲ್ಮೆಟ್ ಧರಿಸಿದ ಇಬ್ಬರು ಅಪರಿಚಿತರು ಮನೆಯೊಳಗೆ ಪ್ರವೇಶಿಸಿದ್ದಾರೆ.

ಈ ಪೈಕಿ ಒಬ್ಬನು ಕುರ್ಚಿಯಲ್ಲಿ ಕುಳಿತಿದ್ದ ವತ್ಸಲ ರಾಜ್ ಅವರ ಬಳಿ ಹೋಗಿ, ಅವರ ಕಣ್ಣು ಮತ್ತು ಬಾಯಿಯನ್ನು ಎರಡು ಕೈಗಳಿಂದ ಮುಚ್ಚಿ ಒತ್ತಿ ಹಿಡಿದಿದ್ದಾನೆ. ಇದರಿಂದ ಅವರು ಕುರ್ಚಿಯಿಂದ ಕೆಳಗೆ ಬಿದ್ದು ಜೋರಾಗಿ ಕೂಗಿದ್ದಾರೆ. ಅದೇ ವೇಳೆ ಇನ್ನೊಬ್ಬ ಅಪರಿಚಿತ ವ್ಯಕ್ತಿ ಎ.ವಿ. ನಾರಾಯಣ ಅವರ ಬಳಿ ಹೋಗಿ ಅವರ ಕಣ್ಣು ಮತ್ತು ಬಾಯಿಯನ್ನು ಒತ್ತಿ ಹಿಡಿದಿದ್ದಾನೆ.

ಮನೆಯೊಳಗಿನಿಂದ ಜೋರಾಗಿ ಬೊಬ್ಬೆ ಕೇಳಿಬಂದ ಪರಿಣಾಮ, ಅಪರಿಚಿತರು ಮನೆಯ ಹಿಂಭಾಗದ ಮೂಲಕ ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ವತ್ಸಲ ರಾಜ್ ಅವರ ತುಟಿಗೆ ಗಾಯವಾಗಿದ್ದು, ಮನೆಯಲ್ಲಿ ಯಾವುದೇ ವಸ್ತುಗಳ ಕಳ್ಳತನವಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಎ.ವಿ. ನಾರಾಯಣ ಅವರು ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 307 ಜೊತೆಗೆ 3(5) ಬಿಎನ್‌ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *