ರಕ್ತೇಶ್ವರಿ ಸೇರಿ ಪರಿವಾರ ದೈವಗಳ ನೇಮೋತ್ಸವ

ಪುತ್ತೂರು: ಯು.ಆರ್. ಪ್ರಾಪರ್ಟೀಸ್ ಪುತ್ತೂರು ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠಾನ ಬೆದ್ರಾಳದ ವತಿಯಿಂದ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಹಾಗೂ ದೈವಗಳ ನೇಮೋತ್ಸವ ಕಾರ್ಯಕ್ರಮ ಡಿಸೆಂಬರ್ 23ರಂದು ನಡೆಯಲಿದೆ ಎಂದು ಯು.ಆರ್. ಪ್ರಾಪರ್ಟೀಸ್ ಆಡಳಿತ ನಿರ್ದೇಶಕ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠಾನದ ಸಂಚಾಲಕ ಉಜ್ವಲ್ ಪ್ರಭು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷಗಳಿಂದ ಯು.ಆರ್. ಪ್ರಾಪರ್ಟೀಸ್ ಸಂಸ್ಥೆ 19 ಲೇಔಟ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಸಾಮಾಜಿಕ ಚಿಂತನೆಯೊಂದಿಗೆ ಎಲ್ಲರಿಗೂ ಅನುಕೂಲಕರವಾಗಿ ಮನೆಗಳನ್ನು ಒದಗಿಸುವ ಕಾರ್ಯ ನಡೆಸುತ್ತಿದೆ ಎಂದು ಹೇಳಿದರು. ಲೇಔಟ್‌ಗಳಲ್ಲಿ ಸಂಪೂರ್ಣ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಇದೀಗ ಸಮಾಜಕ್ಕೆ ಮತ್ತೊಂದು ಕೊಡುಗೆಯಾಗಿ ಸುಮಾರು 10 ಎಕರೆ ಪ್ರದೇಶದಲ್ಲಿ ಶ್ರೀಮಾ ಥೀಂ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ ಎಂದು ತಿಳಿಸಿದರು.

ಈ ಪ್ರದೇಶದ ಪಕ್ಕದಲ್ಲಿದ್ದ ಅಜೀರ್ಣಾವಸ್ಥೆಯಲ್ಲಿನ ದೈವಗಳ ಗುಡಿಗಳನ್ನು ನವೀಕರಿಸಲಾಗಿದ್ದು, ರಕ್ತೇಶ್ವರಿ ಸೇರಿ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಅವರು ಹೇಳಿದರು.

ಡಿ.23ರಂದು ಸಂಜೆ 5 ಗಂಟೆಗೆ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆಗೊಳ್ಳಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ದೀಪಪ್ರಜ್ವಲನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜ್ವಲ್ ಪ್ರಭು ವಹಿಸಲಿದ್ದಾರೆ. ಶಾಸಕ ಅಶೋಕ್ ರೈ ಥೀಂ ಪಾರ್ಕ್ ಲೋಕಾರ್ಪಣೆ ಮಾಡಲಿದ್ದಾರೆ. ಕ್ಯಾ. ಬ್ರಿಜೇಶ್ ಚೌಟ ಶ್ರೀಮಾ ಸೆಲೆಸ್ಟಿಯಲ್ ಅನಾವರಣ ಮಾಡಲಿದ್ದು, ಪುತ್ತೂರಿನ ಮೊದಲ 14 ಅಂತಸ್ತಿನ ಕಟ್ಟಡ ‘ಶ್ರೀಮಾ ಹೈಟ್ಸ್’ಗೆ ಮಾಜಿ ಕಾನೂನು ಸಚಿವ ಮಾಧು ಸ್ವಾಮಿ ಶಿಲಾನ್ಯಾಸ ಮಾಡಲಿದ್ದಾರೆ. ಸಿಂಧೂರ ಪಾರ್ಕ್ ಅನ್ನು ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಗುಣರಂಜನ್ ಶೆಟ್ಟಿ ಲೋಕಾರ್ಪಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಆಡಳಿತ ನಿರ್ದೇಶಕ ಡಾ. ಜಗನ್ನಾಥ್ ಶೆಣೈ ಭಾಗವಹಿಸಲಿದ್ದಾರೆ. ಎಂಎಲ್‌ಸಿ ಕಿಶೋರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ರಾಜ್ಯ ಕುಸ್ತಿ ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಹುಬ್ಬಳ್ಳಿ, ಡಾ. ಪ್ರಸಾದ್ ಭಂಡಾರಿ, ಬಲರಾಮ ಆಚಾರ್ಯ, ಎಸ್.ಆರ್. ರಂಗಮೂರ್ತಿ, ಪುಷ್ಪರಾಜ್ ಜೈನ್, ಲೀಲಾವತಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಮಂಗಳೂರು ಕಾರ್ಪೋರೇಟರ್ ಪ್ರವೀಣ್‌ಚಂದ್ರ ಆಳ್ವ, ಹೇಮನಾಥ ಶೆಟ್ಟಿ ಕಾವು, ನಗರಸಭಾ ಸದಸ್ಯೆ ರೋಹಿಣಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಡಿ.22ರಂದು ಸಂಜೆ 4 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಡಾ. ಪ್ರಸಾದ್ ಭಂಡಾರಿ ಹಾಗೂ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಮೈಸೂರಿನ ರಾಮಚಂದ್ರಾಚಾರ್ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಡಿ.23ರಂದು ಬೆಳಿಗ್ಗೆ 8 ಗಂಟೆಗೆ ಕಲಶಪ್ರಧಾನ ಹೋಮ, ಕಲಶಾಭಿಷೇಕ, ಗಣಪತಿ ಹೋಮ, ನಾಗತಂಬಿಲ, ರಕ್ತೇಶ್ವರಿ ಸಪರಿವಾರ ದೈವಗಳಿಗೆ ಸೇವೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ನವೀಕೃತ ಬೆದ್ರಾಳ ಶ್ರೀದೇವಿ ಭಜನಾಮಂದಿರವನ್ನು ಯು.ಆರ್. ಪ್ರಾಪರ್ಟೀಸ್ ಸಹಾಯಕ ಆಡಳಿತ ನಿರ್ದೇಶಕಿ ರಕ್ಷಾ ಎಸ್.ಆರ್ ದೀಪಪ್ರಜ್ವಲನೆ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಭಜನಾ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ದೈವಗಳ ಭಂಡಾರ ತೆಗೆಯಲಾಗುತ್ತಿದ್ದು, ರಾತ್ರಿ 9 ಗಂಟೆಯಿಂದ ರಕ್ತೇಶ್ವರಿ ದೈವ ಹಾಗೂ ವರ್ಣರ ಪಂಜುರ್ಲಿ ಪರಿವಾರ ದೈವಗಳ ನೇಮೋತ್ಸವ ಜರುಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿಗಳಾದ ಸಂತೋಷ್ ಕುಮಾರ್ ರೈ, ಪ್ರಸನ್ನ ಕುಮಾರ್ ಶೆಟ್ಟಿ, ಬಾಲಕೃಷ್ಣ ಗೌಡ, ಸಂಜೀವ ಗೌಡ, ನಿತಿನ್ ಮಂಗಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *