ಭಾವ–ರಾಗ–ತಾಳ ಕಾರ್ಯಕ್ರಮದಿಂದ ಕಲಾರಾಧಕರ ಮನಸೂರೆ

ಪುತ್ತೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಆಶ್ರಯದಲ್ಲಿ, ನೃತ್ಯೋಪಾಸನಾ ಕಲಾ ಅಕಾಡೆಮಿ (ರಿ.) ಪುತ್ತೂರು ಇದರ ಸಹಯೋಗದೊಂದಿಗೆ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಸಹಕಾರದಲ್ಲಿ ಗಡಿ–ಸಂಸ್ಕೃತಿ ಉತ್ಸವದ ಅಂಗವಾಗಿ ‘ಕಲಾರ್ಣವ–2025’ ಭಾವ–ರಾಗ–ತಾಳ ಕಾರ್ಯಕ್ರಮವು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮ ಕಲಾರಾಧಕರನ್ನು ಮನಸೂರೆಗೊಳಿಸಿತು.

ಕಾರ್ಯಕ್ರಮದಲ್ಲಿ ಫೆಡರೇಶನ್ ಆಫ್ ಇಂಡಿಯಾದ ಯುವ ಕಲಾ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದ ಮಾಸ್ಟರ್ ಶಮಂತಕ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ನಂತರ ಅಂತರ್ರಾಷ್ಟ್ರೀಯ ಖ್ಯಾತಿಯ ಬಾಲ ವಯಲಿನ್ ಕಲಾವಿದೆ ಕುಮಾರಿ ಗಂಗಾ ಶಶಿಧರನ್ ಅವರ ವಯಲಿನ್ ವೈಭವ ಪ್ರೇಕ್ಷಕರಿಗೆ ಸಂಗೀತದ ಸೊಗಡನ್ನು ನೀಡಿತು. ಇದಕ್ಕೂ ಮೊದಲು ಸಭಾ ಕಾರ್ಯಕ್ರಮ ಜರುಗಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕನ್ನಡಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ನಡೆಯಬೇಕು ಎಂದರು. ಜೊತೆಗೆ ಎಲ್ಲಾ ಭಾಷೆಗಳಿಗೆ ಸಮಾನ ಗೌರವ ನೀಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳು ಸುಮಾರು ರೂ. 60 ಕೋಟಿ ವೆಚ್ಚದಲ್ಲಿ ನಡೆಯಲಿದ್ದು, ಎಲ್ಲರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.

ತುಳುವನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಆಂಧ್ರಪ್ರದೇಶದಲ್ಲಿ ಅನುಸರಿಸಿದ ಮಾದರಿಯನ್ನು ಅಧ್ಯಯನ ಮಾಡಲು ಪರಿಣಿತರ ತಂಡವನ್ನು ಕಳುಹಿಸಲಾಗಿದೆ. ಈ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ ಎಂದು ತಿಳಿಸಿದ ಅವರು, ಗಡಿನಾಡಿನ ತುಳು ಭಾಷೆಗೆ ಮಾನ್ಯತೆ ದೊರಕಿಸಲು ಸರ್ಕಾರದ ಜೊತೆಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವೂ ಸಹಕರಿಸಬೇಕು ಎಂದು ಹೇಳಿದರು.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ನಿಂತ ನೀರಿನಂತೆ ಅಲ್ಲದೆ ನಿರಂತರವಾಗಿ ಚಲಿಸುತ್ತಿರಬೇಕು ಎಂದರು. ಗಡಿ ಪ್ರದೇಶದಲ್ಲಿ ಕನ್ನಡವನ್ನು ಬೆಳೆಸಿ ಉಳಿಸುವ ಕಾರ್ಯವನ್ನು ಪ್ರಾಧಿಕಾರ ಮಾಡುತ್ತಿರುವುದು ಶ್ಲಾಘನೀಯ ಎಂದರು. ಯುವಜನಾಂಗ ನಮ್ಮ ಸಂಸ್ಕೃತಿಯಿಂದ ದೂರ ಸರಿಯುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಕಲಾ ಕಾರ್ಯಕ್ರಮಗಳು ಅವರನ್ನು ಮತ್ತೆ ಸಂಸ್ಕೃತಿಯ ಕಡೆಗೆ ಕರೆತರುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರ ವಹಿಸಿದ್ದರು. ಮಾತನಾಡಿದ ಅವರು, 2010ರಲ್ಲಿ ಪ್ರಾಧಿಕಾರ ಸ್ಥಾಪನೆಯಾಗಿದ್ದು, ಆರು ಗಡಿ ರಾಜ್ಯಗಳಲ್ಲಿರುವ ಕನ್ನಡಿಗರ ರಕ್ಷಣೆ ಮತ್ತು ಭಾಷಾ ಸಂರಕ್ಷಣೆಯ ಉದ್ದೇಶ ಹೊಂದಿದೆ ಎಂದರು. ಕೇರಳ, ಗೋವಾ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹೊರರಾಜ್ಯಗಳಲ್ಲಿಯೂ ಕನ್ನಡಿಗರು ಕನ್ನಡವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲಿನಿ ಆತ್ಮಭೂಷಣ ದಂಪತಿಗಳನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಜನಪದ ನೃತ್ಯ ಪ್ರದರ್ಶನ ನಡೆಯಿತು. ಸಂಸದ ಕ್ಯಾ. ಬ್ರಿಜೇಶ್ ಚೌಟ ಕಲಾವಿದರನ್ನು ಗೌರವಿಸಿ ಶುಭ ಹಾರೈಸಿದರು.

ಜನಪದ ನೃತ್ಯದಲ್ಲಿ ತಮಟೆ ನೃತ್ಯ, ವೀರಗಾಸೆ, ಅಗೋರಿ ನೃತ್ಯ, ಪೂಜಾ ಕುಣಿತ ಮೊದಲಾದವು ವಿಶೇಷ ಆಕರ್ಷಣೆಯಾಗಿದ್ದವು. ದೇಶ–ವಿದೇಶಗಳಲ್ಲಿ 300ಕ್ಕೂ ಅಧಿಕ ವೇದಿಕೆಗಳಲ್ಲಿ ವಯಲಿನ್ ಕಛೇರಿ ನೀಡಿರುವ ಕೇರಳ ಮಲಪುರಂ ಮೂಲದ ಅಂತರ್ರಾಷ್ಟ್ರೀಯ ಖ್ಯಾತಿಯ ಬಾಲ ಕಲಾವಿದೆ ಕುಮಾರಿ ಗಂಗಾ ಶಶಿಧರನ್ ಇದೇ ಮೊದಲ ಬಾರಿಗೆ ಪುತ್ತೂರಿಗೆ ಆಗಮಿಸಿದ್ದರು. ಧಾರವಾಡ ಮೂಲದ ಎಳೆ ಭರತನಾಟ್ಯ ಪ್ರತಿಭೆ ಮಾಸ್ಟರ್ ಶಮಂತಕ ಅವರು ತಬಲಾ, ಮೃದಂಗ ಹಾಗೂ ಯಕ್ಷಗಾನ ಕಲಾವಿದನಾಗಿಯೂ ಹೆಸರು ಮಾಡಿದ್ದಾರೆ.

ಸುಮಾರು ಮೂರುವರೆ ಗಂಟೆಗಳ ಕಾಲ ನಡೆದ ಈ ಕಲಾ ಕಾರ್ಯಕ್ರಮವನ್ನು ಪುತ್ತೂರಿನ ಕಲಾರಾಧಕರು ಭಕ್ತಿಯಿಂದ ಆಸ್ವಾದಿಸಿದರು. “ಹುಟ್ಟಿದರೆ ಕನ್ನಡ ನಾಡು” ಹಾಡನ್ನು ವಯಲಿನ್‌ನಲ್ಲಿ ನುಡಿಸಿದ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಅವರು ಬಾಲ ಕಲಾವಿದೆಯನ್ನು ಕನ್ನಡ ಪೇಟ, ಶಾಲು ತೊಡಿಸಿ ಗೌರವಿಸಿದರು. ಬಳಿಕ ಗಂಗಾ ಶಶಿಧರನ್ ಅವರು ಕನ್ನಡಕ್ಕೆ ಗೌರವ ಸೂಚಿಸುವಂತೆ ನಿಂತು ವಯಲಿನ್ ವಾದನ ನಡೆಸಿದರು. ಇಬ್ಬರು ಬಾಲ ಕಲಾವಿದರಿಗೆ ನೃತ್ಯೋಪಾಸನಾ ಕಲಾಕೇಂದ್ರದ ವಿದ್ಯಾರ್ಥಿನಿ ಧನ್ಯಶ್ರೀ ರಚಿಸಿದ ಚಿತ್ರವನ್ನು ಸ್ಮರಣಿಕೆಯಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ತಹಸೀಲ್ದಾರ್ ಬಿ.ಎಸ್. ಕೂಡಲಗಿ, ನೃತ್ಯೋಪಾಸನಾ ಅಕಾಡೆಮಿ ಸ್ಥಾಪಕ ಟ್ರಸ್ಟಿ ಹಾಗೂ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ, ಪತ್ರಕರ್ತ ಆತ್ಮಭೂಷಣ, ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಪ್ರೊ. ವಿಜಯಾ ಸರಸ್ವತಿ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *