ಮಡಿಕೇರಿ:
ಗೋವುಗಳನ್ನು ಸಾಕಾಣಿಕೆ ಹೆಸರಿನಲ್ಲಿ ಖರೀದಿಸಿ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.




ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ತಲಿಪರಂಬ ನಿವಾಸಿಗಳಾದ ಪಿ.ಪಿ. ಸಾಧಿಕ್ (38) ಹಾಗೂ ಅಬ್ದುಲ್ ಅಹಮದ್ ತಂಜಲ್ (34) ಎಂದು ಗುರುತಿಸಲಾಗಿದೆ. ಆರೋಪಿಗಳು ತಲಿಪರಂಬದಿಂದ ಬಂದು ಪಿರಿಯಾಪಟ್ಟಣ ತಾಲೂಕು ಸೇರಿದಂತೆ ವಿವಿಧ ಪ್ರದೇಶಗಳಿಂದ ದನಕರುಗಳನ್ನು ಖರೀದಿಸಿ, ನಡುರಾತ್ರಿ ವೇಳೆ ಕೇರಳಕ್ಕೆ ಸಾಗಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ.


ಪೊಲೀಸರ ಗಮನಕ್ಕೆ ಬಾರದಂತೆ ಸಾಗಾಟ ಮಾಡಲು ಲಾರಿಯಲ್ಲಿ ಆಲೂಗಡ್ಡೆ ಮೂಟೆಗಳನ್ನು ತುಂಬಿಸಿ ಗೋವುಗಳನ್ನು ಮರೆಮಾಚಲಾಗಿತ್ತು. ಮುಂಜಾನೆ ಲಾರಿ ತಪಾಸಣಾ ಕೇಂದ್ರದ ಬಳಿ ಲಾರಿಯನ್ನು ತಡೆದು ಪರಿಶೀಲಿಸಿದಾಗ, ಹತ್ತಕ್ಕೂ ಹೆಚ್ಚು ಗೋವುಗಳು ಪತ್ತೆಯಾಗಿವೆ.
ವಿಷಯ ತಿಳಿದ ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಅವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಲಾರಿ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.


