ಸುಬ್ರಹ್ಮಣ್ಯ:
ಕರ್ನಾಟಕದ ಅತೀ ಪ್ರಸಿದ್ಧ ಹಿಂದೂ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸನಾತನ ಹಿಂದೂ ಧಾರ್ಮಿಕ ಅಸ್ಮಿತೆಗೆ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ವಿಶ್ವ ಹಿಂದೂ ಪರಿಷದ್ (VHP) ತೀವ್ರವಾಗಿ ಖಂಡಿಸಿದೆ.




ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಅತ್ಯಂತ ಕಾರಣಿಕ ಕ್ಷೇತ್ರವಾಗಿರುವ ಕುಕ್ಕೆ ಶ್ರೀ ಕ್ಷೇತ್ರದಲ್ಲಿ, ಇತ್ತೀಚೆಗೆ ಪವಿತ್ರ ಕಿರುಷಷ್ಠಿ ಸಂಧರ್ಭ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅನ್ಯಮತೀಯ ವ್ಯಕ್ತಿಗಳನ್ನು ಅತಿಥಿಗಳಾಗಿ ವೇದಿಕೆಯಲ್ಲಿ ಗುರುತಿಸಿರುವುದು ಅಸಮಂಜಸ ಎಂದು ವಿಹಿಂಪ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಆಮಂತ್ರಣ ಪತ್ರಿಕೆಯಲ್ಲಿಯೇ ಉಲ್ಲೇಖಿಸಿರುವುದು ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇರಿದಂತೆ ವಿವಿಧ ಸೇವೆಗಳಲ್ಲಿ ಅನ್ಯಮತೀಯರು ತಮ್ಮ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಭಾಗವಹಿಸುವುದು ಪ್ರತ್ಯೇಕ ವಿಷಯವಾಗಿದ್ದು, ಆದರೆ ಕ್ಷೇತ್ರಕ್ಕೆ ಸಂಬಂಧಪಟ್ಟ ಹಬ್ಬಗಳು ಹಾಗೂ ಧಾರ್ಮಿಕ ಸಭೆಗಳಲ್ಲಿ ಅನ್ಯಮತೀಯರನ್ನು ವೇದಿಕೆಯಲ್ಲಿ ಭಾಗಿಯಾಗಿಸುವುದು ಸರ್ವಥಾ ತಪ್ಪು ಎಂದು ವಿಹಿಂಪ ಅಭಿಪ್ರಾಯಪಟ್ಟಿದೆ. ಇದಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.


ಇದೇ ವೇಳೆ, ನಿಗಮ–ಮಂಡಳಿಯ ಪ್ರತಿನಿಧಿಗಳು ಅನ್ಯಮತೀಯರಾಗಿದ್ದರೂ ಅವರನ್ನು ಧಾರ್ಮಿಕ ವೇದಿಕೆಗೆ ಆಹ್ವಾನಿಸುವ ಯಾವುದೇ ಪ್ರೋಟೋಕಾಲ್ ಇದೆಯೇ ಎಂಬುದರ ಬಗ್ಗೆ ಕೂಡ ಸ್ಪಷ್ಟತೆ ಅಗತ್ಯವಿದೆ ಎಂದು ವಿಹಿಂಪ ಒತ್ತಾಯಿಸಿದೆ.
ಇನ್ನೊಂದೆಡೆ, ಬಾಂಗ್ಲಾದೇಶದಲ್ಲಿ ಮತಾಂಧ ಜಿಹಾದಿ ಮಾನಸಿಕತೆಯ ದುರುಳರಿಂದ ಹಿಂದೂಗಳನ್ನು ಗುರುತಿಸಿ ನಡೆಯುತ್ತಿರುವ ಅವ್ಯಾಹತ ದಾಳಿಗಳು ಮತ್ತು ಕಗ್ಗೊಲೆಗಳನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಭಾರತ ಸರ್ಕಾರ ಮಧ್ಯಪ್ರವೇಶಿಸಿ, ಬಾಂಗ್ಲಾದೇಶ ಸರ್ಕಾರದ ಮೇಲೆ ಸೂಕ್ತ ಒತ್ತಡ ಹೇರಿ ಅಲ್ಲಿನ ಹಿಂದೂಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಹಿಂಪ ಸಂಘಟನೆ ಆಗ್ರಹಿಸಿದೆ ಎಂದು ಡಾ. ಕೃಷ್ಣಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


