ಪರಿವರ್ತನಾ ಟ್ರಸ್ಟ್ ನೇತೃತ್ವದಲ್ಲಿ ಜನಜಾಗೃತಿ ಕಾರ್ಯಕ್ರಮ

ಪುತ್ತೂರು:
‘ಡ್ರಗ್ಸ್ ಮುಕ್ತ ಕರ್ನಾಟಕ’ ಎಂಬ ಮಹತ್ವದ ಗುರಿಯನ್ನು ಹೊಂದಿಕೊಂಡು ಪರಿವರ್ತನಾ ಟ್ರಸ್ಟ್ ಬೆಂಗಳೂರು ವತಿಯಿಂದ ರಾಜ್ಯದಾದ್ಯಂತ 45 ದಿನಗಳ ಕಾಲ ನಡೆಯುತ್ತಿರುವ ಜನಜಾಗೃತಿ ಅಭಿಯಾನದ ಭಾಗವಾಗಿ ಡಿಸೆಂಬರ್ 22ರಂದು ಪುತ್ತೂರಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ನಗರದ ದರ್ಬೆ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಿತು.

ಯುವ ಜನತೆ ಡ್ರಗ್ಸ್ ಹಾಗೂ ಇತರ ಮಾದಕ ವ್ಯಸನಗಳಿಂದ ದೂರವಿರಬೇಕು, ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ಎಚ್ಚರಿಕೆಯಿಂದ ನಿಗಾವಹಿಸಬೇಕು ಮತ್ತು ಸಮಾಜ ಸಮಗ್ರವಾಗಿ ಮಾದಕ ವ್ಯಸನದ ವಿರುದ್ಧ ಹೋರಾಟ ನಡೆಸಬೇಕು ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಒಳಗೊಂಡ ಜಾಗೃತಿ ರಥವನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ, ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಯುವಕರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಮೋಹನ್ ದಾಸ್, ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ, ಸದಸ್ಯರಾದ ಪ್ರಸಾದ್ ಪುರುಷರಕಟ್ಟೆ, ಪರಿವರ್ತನಾ ಟ್ರಸ್ಟ್‌ನ ಸಂದೇಶ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಹರೀಶ್ ಬಿಜತ್ರೆ, ಹರಿಪ್ರಸಾದ್ ಯಾದವ್, ಶಶಿಧರ್ ನಾಯಕ್, ಸಂತೋಷ್ ಕುಮಾರ್ ಕೈಕಾರ, ನಾಗೇಂದ್ರ ಬಾಳಿಗ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *