ನವದೆಹಲಿ: ಬಾಂಗ್ಲಾದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು, ಇದರ ಪರಿಣಾಮವಾಗಿ ಭಾರತದಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಗಳಲ್ಲಿ ವೀಸಾ ಸೇವೆಗಳನ್ನು ಬಾಂಗ್ಲಾದೇಶ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನವದೆಹಲಿ ಹಾಗೂ ತ್ರಿಪುರದಲ್ಲಿರುವ ಬಾಂಗ್ಲಾದೇಶದ ರಾಯಭಾರಿ ಕಚೇರಿಗಳಲ್ಲಿ ವೀಸಾ ಸೇವೆಗಳು ರದ್ದುಗೊಂಡಿವೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ನವದೆಹಲಿ ಹಾಗೂ ತ್ರಿಪುರದಲ್ಲಿರುವ ಬಾಂಗ್ಲಾದೇಶದ ರಾಯಭಾರಿ ಕಚೇರಿಗಳ ಎದುರು ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲೇ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ನವದೆಹಲಿಯಲ್ಲಿರುವ ಬಾಂಗ್ಲಾದೇಶ ರಾಜತಾಂತ್ರಿಕ ಕಚೇರಿ ಪ್ರಕಟಣೆ ಹೊರಡಿಸಿ, “ಅನಿವಾರ್ಯ ಕಾರಣಗಳಿಂದ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ” ಎಂದು ತಿಳಿಸಿದೆ. ಭಾನುವಾರ ನಡೆದ ಪ್ರತಿಭಟನೆಗಳ ನಂತರ ತ್ರಿಪುರದಲ್ಲಿರುವ ಬಾಂಗ್ಲಾದೇಶದ ರಾಜತಾಂತ್ರಿಕ ಕಚೇರಿಯೂ ಇದೇ ರೀತಿಯ ಪ್ರಕಟಣೆ ಹೊರಡಿಸಿದೆ.
ಇದರ ಜೊತೆಗೆ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಖಾಸಗಿ ವೀಸಾ ಸೇವಾ ಸಂಸ್ಥೆಗಳು ಕೂಡ ತಾತ್ಕಾಲಿಕವಾಗಿ ವೀಸಾ ಸೇವೆಗಳನ್ನು ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.
ಇನ್ನೊಂದೆಡೆ, ಬಾಂಗ್ಲಾದೇಶದಲ್ಲಿರುವ ಭಾರತದ ಹೈ ಕಮಿಷನರ್ ಕಚೇರಿ ಎದುರಲ್ಲೂ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಗುರುವಾರದಿಂದಲೇ ಭಾರತವೂ ಬಾಂಗ್ಲಾದೇಶದಲ್ಲಿನ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಈ ಬೆಳವಣಿಗೆಗಳು ಭಾರತ–ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *