ಬೆಂಗಳೂರು :  ಬ್ರೆಡ್‌ ಒಳಗೆ ಮಾದಕ ವಸ್ತುವನ್ನು ಪ್ಯಾಕ್‌ಮಾಡಿ ಯಾರಿಗೂ ಅನುಮಾನ ಬಾರದಂತೆ ಮುಂಬೈನಿಂದ ಸಾಗಣೆ ಮಾಡಿಕೊಂಡು ಖಾಸಗಿ ಟ್ರಾವೆಲ್ಸ್ ಬಸ್‌‍ನಲ್ಲಿ ನಗರಕ್ಕೆ ಬಂದಿದ್ದ ನೈಜೀರಿಯಾ ದೇಶದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 1.20 ಕೋಟಿ ರೂ.

ಮೌಲ್ಯದ ಕೊಕೇನ್‌ ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾದ ಓಲಜೈಡ್‌ ಎಸ್ತರ್‌ ಇಯಾನುವೊಲುವಾ (29) ಬಂಧಿತ ಮಹಿಳೆ. 2024 ರಲ್ಲಿ ದೆಹಲಿಯ ಯೂನಿವರ್ಸಿಟಿಯೊಂದರಲ್ಲಿ ವ್ಯಾಸಂಗ ಮಾಡುವುದಾಗಿ ವಿದ್ಯಾರ್ಥಿ ವೀಸಾ ಪಡೆದು ದೆಹಲಿಗೆ ಬಂದಿರುವ ಈ ಮಹಿಳೆ, ಕಾಲೇಜಿಗೆ ದಾಖಲಾಗದೇ ಮುಂಬೈನ ಗಾಲಾನಗರ, ಅಂಬವಾಡಿ, ನಲ್ಲಾಸೋಪ್ರಾ ಕಡೆಗಳಲ್ಲಿ ವಾಸವಾಗಿದ್ದುಕೊಂಡು, ಮುಂಬೈನಲ್ಲಿದ್ದ ಆಕೆಯ ಸ್ನೇಹಿತನು ನೀಡಿದ ಕೊಕೇನ್‌ ಅನ್ನು ಪಡೆದುಕೊಂಡು, ಆತನು ಹೇಳಿದ ಸ್ಥಳಗಳಿಗೆ ಸಾಗಣೆ ಮಾಡಿ ಡ್ರಗ್‌ಪೆಡ್ಲಿಂಗ್‌ ಮಾಡುವ ಕೃತ್ಯದಲ್ಲಿ ತೊಡಗಿಕೊಂಡು ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದಳು.

ಈಕೆಯು ಮುಂಬೈನಿಂದ ಬೆಂಗಳೂರಿಗೆ ಬರುವ ಖಾಸಗಿ ಬಸ್‌‍ಗಳಲ್ಲಿ ಪ್ರಯಾಣಿಸಿ ಕೊಕೇನ್‌ನ್ನು ಬ್ರೆಡ್‌ ಮಧ್ಯೆ ಕತ್ತರಿಸಿ ಮಾದಕ ವಸ್ತುವನ್ನು ಇಟ್ಟುಕೊಂಡು ಯಾರಿಗೂ ಅನುಮಾನ ಬಾರದಂತೆ ಕವರ್‌ಪ್ಯಾಕ್‌ಮಾಡಿ ಸಾಗಣೆ ಮಾಡುತ್ತಿದ್ದಳು.ವರ್ತೂರು ಪೊಲೀಸ್‌‍ ಠಾಣಾ ವ್ಯಾಪ್ತಿಯ ಗ್ರೀಸ್‌‍ ಟ್ರಸ್ಟ್‌ನಲ್ಲಿ ವಾಸವಾಗಿದ್ದ ಈ ಮಹಿಳೆ ತನ್ನ ಸ್ನೇಹಿತೆ ಮನೆಗೆ ಆಗಾಗ್ಗೆ ಬ್ರೆಡ್‌ನಲ್ಲಿ ಕೊಕೇನ್‌ ಬಚ್ಚಿಟ್ಟುಕೊಂಡು ಬರುತ್ತಿದ್ದಳು.

Leave a Reply

Your email address will not be published. Required fields are marked *