ಕಡಬ: ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ನೈತಿಕತೆ ಬೆಳೆಸುವ ಮೌಲ್ಯಾಧಾರಿತ ಶಿಕ್ಷಣ ಅತ್ಯಂತ ಅಗತ್ಯವಾಗಿದೆ ಎಂದು ಸೈಂಟ್ ಮೇರಿಸ್ ಪ್ರೌಢಶಾಲೆ ಮರ್ಧಾಳದ ಮುಖ್ಯೋಪಾಧ್ಯಾಯರಾದ ಶ್ರೀಯುತ ಇಶೋ ಫಿಲಿಪ್ ಹೇಳಿದರು.
ಅವರು ಕಡಬದ ಸೈಂಟ್ ಆನ್ಸ್ ಕಿಂಡರ್ ಗಾರ್ಟನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕೆಂದು ಅವರು ಕರೆ ನೀಡಿದರು.




ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾ. ಪ್ರಕಾಶ್ ಪೌಲ್ ಡಿಸೋಜ ಅವರು ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ಕಡಬ ಸೈಂಟ್ ಜೋಕಿಮ್ ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿಯಾದ ಶ್ರೀಮತಿ ಜೆಸಿಂತಾ ವೇಗಸ್, ಸೈಂಟ್ ಜೋಕಿಮ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಕಿರಣ್ ಕುಮಾರ್, ಸೈಂಟ್ ಜೋಕಿಮ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಸಿಸ್ಟರ್ ಹಿಲ್ಡಾ ರೋಡ್ರಿಗಸ್ ಉಪಸ್ಥಿತರಿದ್ದರು.



ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ. ಸುನಿಲ್ ಪ್ರವೀಣ್ ಪಿಂಟೋ ಸ್ವಾಗತಿಸಿದರು. ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳಾದ ತ್ರಿಹಾನ್, ಶ್ಲೋಕಾ ಎಸ್. ಪೂಜಾರಿ, ಅಭಿಷ್ಯ ಹೆಚ್. ಗೌಡ, ಜೊವಿಟಾ ಅಲಿಷಾ ವೇಗಸ್, ಕ್ಷಿತಿ, ವಿಹಾ ಟಿ.ಎಸ್., ಝಿಯಾ ಫಾತಿಮಾ ಅವರು ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು.
ಸೈಂಟ್ ಆನ್ಸ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ದಕ್ಷ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಮೀನಾಕ್ಷಿ ಹಾಗೂ ಕು. ಸುರಕ್ಷಾ ಬಹುಮಾನಿತ ವಿದ್ಯಾರ್ಥಿಗಳ ವಿವರಗಳನ್ನು ಪ್ರಕಟಿಸಿದರು.
ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಪ್ರೀತಿ ಹಾಗೂ ಏಕತೆಯನ್ನು ಬಿಂಬಿಸುವ “ಬಂಧುತ್ವ” ಎಂಬ ಸಾಂಸ್ಕೃತಿಕ ನೃತ್ಯ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಸಾರಾ ಎಲ್. ಡಿ. ಸೋಜಾ ನಿರೂಪಿಸಿದರು.


