ಅಯೋಧ್ಯೆ: ಕರ್ನಾಟಕ ಮೂಲದ ಅನಾಮಿಕ ದಾನಿಯೊಬ್ಬರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಗೆ ಸುಮಾರು ₹25ರಿಂದ ₹30 ಕೋಟಿ ಮೌಲ್ಯದ ಭವ್ಯ ಚಿನ್ನದ ರಾಮನ ಮೂರ್ತಿಯನ್ನು ದಾನವಾಗಿ ನೀಡಿದ್ದಾರೆ. ಈ ವಿಷಯವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ ಅವರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಭಾರತದ ಸಾಂಪ್ರದಾಯಿಕ ಶಿಲ್ಪಕಲಾ ಶೈಲಿಯಲ್ಲಿ ನಿರ್ಮಿಸಲಾದ ಈ ಮೂರ್ತಿ ಸುಮಾರು 10 ಅಡಿ ಎತ್ತರ ಹೊಂದಿದ್ದು, ವಜ್ರ, ಪಚ್ಚೆ, ನೀಲಮಣಿ ಸೇರಿದಂತೆ ಅನೇಕ ಅಮೂಲ್ಯ ರತ್ನಗಳು ಮತ್ತು ಚಿನ್ನದಿಂದ ಅಲಂಕರಿಸಲಾಗಿದೆ. ಈ ಮೂರ್ತಿಯನ್ನು ಕರ್ನಾಟಕ ಮೂಲದ ಅನಾಮಿಕ ಭಕ್ತರೊಬ್ಬರು ದಾನವಾಗಿ ನೀಡಿರುವುದಾಗಿ ಟ್ರಸ್ಟ್ ತಿಳಿಸಿದೆ. ದಾನಿದಾರರ ವಿವರಗಳನ್ನು ಗೌಪ್ಯವಾಗಿರಿಸಲಾಗಿದೆ.
ಮೂರ್ತಿಯ ತೂಕವನ್ನು ಸದ್ಯ ಅಳೆಯಲಾಗುತ್ತಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು ಐದು ಕ್ವಿಂಟಲ್ ತೂಕ ಇರಬಹುದೆಂದು ತಿಳಿದುಬಂದಿದೆ. ನಿಖರವಾದ ಲೋಹ ಸಂಯೋಜನೆ ಮತ್ತು ರತ್ನಗಳ ವಿವರವನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ.

ತಂಜಾವೂರಿನ ನುರಿತ ಶಿಲ್ಪಕಾರರು ಈ ಮೂರ್ತಿಯ ಕೆತ್ತನೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕಲಾತ್ಮಕತೆ ಮತ್ತು ಭವ್ಯತೆಯನ್ನು ಅನಾವರಣಗೊಳಿಸಿದ್ದಾರೆ. ಮೂರ್ತಿಯು ವಜ್ರಗಳು, ಪಚ್ಚೆಗಳು, ನೀಲಮಣಿಗಳು ಮತ್ತು ಶುದ್ಧ ಚಿನ್ನದಿಂದ ನಿರ್ಮಿತವಾಗಿದ್ದು, ಅದಕ್ಕೆ ವಿಶಿಷ್ಟ ಆಕರ್ಷಣೆ ದೊರೆತಿದೆ.
ಇದೇ ಡಿಸೆಂಬರ್ 29ರಿಂದ 2026ರ ಜನವರಿ 2ರವರೆಗೆ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದ್ದು, ಪ್ರತಿಷ್ಠಾ ದ್ವಾದಶಿಗೆ ಸಂಬಂಧಿಸಿದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ಗರ್ಭಗುಡಿಯಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನದವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀರಾಮ ಅಭಿಷೇಕ, ಶೃಂಗಾರ, ಭೋಗ ಮತ್ತು ಪ್ರಕಟ್ಯ ಆರತಿ ನೆರವೇರಲಿದೆ.
ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ಟೀಲದಲ್ಲಿ ಈ ಭವ್ಯ ರಾಮನ ಮೂರ್ತಿಯನ್ನು ಸ್ಥಾಪಿಸುವ ಸಾಧ್ಯತೆ ಇದ್ದು, ಅದಕ್ಕೂ ಮುನ್ನ ಮೂರ್ತಿಯ ಅನಾವರಣ ನಡೆಯಲಿದೆ. ಬಳಿಕ ದೇಶಾದ್ಯಂತದ ಸಂತರು ಮತ್ತು ಮಹಾಂತರು ಭಾಗವಹಿಸುವ ಪವಿತ್ರಿಕರಣ ಸಮಾರಂಭ ಆಯೋಜಿಸಲಾಗುವುದು ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *