ಪುತ್ತೂರು: ಮನುಷ್ಯನ ಮಾನಸಿಕ ವ್ಯತ್ಯಾಸವೇ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಒಳಿತು–ಕೆಡುಕಿನ ಅರಿವು ನಮ್ಮಲ್ಲಿ ಇರಬೇಕು. ಉಪಾಸನೆಯೇ ನೆಮ್ಮದಿಯ ಬದುಕಿನ ರಹದಾರಿ. ಉತ್ತಮ ಅಂತಃಕರಣದ ಮೂಲಕ ಸಮಾಜಸೇವೆ ಮಾಡುವ ವಿದ್ಯಾರ್ಥಿಗಳು ರೂಪುಗೊಳ್ಳಬೇಕು ಎಂದು ಉಡುಪಿ ಶ್ರೀ ಅದಮಾರು ಶ್ರೀಮಾನ್ ಮದ್ವಾಚಾರ್ಯ ಮೂಲ ಮಹಾಸಂಸ್ಥಾನದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಅವರು ಬೊಳುವಾರಿನ ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್‌ನ ನೂತನ ಕಾಲೇಜು ಕ್ಯಾಂಪಸ್ ಅನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಉತ್ತಮ ಕಾರ್ಯಗಳು ನಡೆಯುವಾಗ ಒಂದಾಗುವ ಮನಸ್ಸು ನಮ್ಮದಾಗಬೇಕು. ನಿರೀಕ್ಷೆರಹಿತ ಸೇವೆಯ ಮೂಲಕ ಸಂಸ್ಥೆಗಳು ಸಮಾಜಕ್ಕೆ ಕೊಡುಗೆ ನೀಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಕಾರ್ಯ ನಡೆಯಬೇಕು. ವಿದ್ಯೆಯ ಜೊತೆಗೆ ಸಂಸ್ಕಾರ ನೀಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಅವರು ಹೇಳಿದರು. ವೈದ್ಯರಲ್ಲೂ ದೇವರನ್ನು ಕಾಣುವ ದೃಷ್ಟಿ ನಮ್ಮದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕರಾವಳಿ ಸಾಧನೆಯ ಸಾಗರ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಪುತ್ತೂರಿನ ಪ್ರಗತಿಗೆ ಇಂತಹ ಶಿಕ್ಷಣ ಹಾಗೂ ವೈದ್ಯಕೀಯ ಸಂಸ್ಥೆಗಳು ಅತ್ಯಂತ ಅಗತ್ಯ. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅಪರೂಪದ ಸಾಧನೆಗಳು ನಡೆದಿವೆ. ವೈದ್ಯಕೀಯ ಸೇವೆಗಳು ದೇಶಕ್ಕೆ ಮಹತ್ವದ ಕೊಡುಗೆ ನೀಡಿವೆ. ಕರಾವಳಿ ಕರ್ನಾಟಕ ಸಾಧನೆಯ ಸಾಗರವಾಗಿದ್ದು, ಹೊಸ ಸಾಧನೆಗಳತ್ತ ಯೋಚಿಸುವ ಶಕ್ತಿ ಇಲ್ಲಿನ ಜನರಲ್ಲಿ ಇದೆ. ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್ ಪುತ್ತೂರಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು.

25 ವರ್ಷಗಳ ಬೆಳವಣಿಗೆ: ಡಾ. ಯು. ಶ್ರೀಪತಿ ರಾವ್
ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಯು. ಶ್ರೀಪತಿ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 25 ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರ ಬಹಳಷ್ಟು ಬೆಳವಣಿಗೆ ಕಂಡಿದೆ. ವೈದ್ಯರ ಜೊತೆಗೆ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಅಗತ್ಯವನ್ನು ಗಮನಿಸಿ 2013ರಲ್ಲಿ ಪ್ಯಾರಾಮೆಡಿಕಲ್ ಕಾಲೇಜು ಆರಂಭಿಸಲಾಯಿತು. ಇಂದು ಸಂಸ್ಥೆ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಸ್ತೃತ ಕ್ಯಾಂಪಸ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಆರಂಭಗೊಳ್ಳಲಿರುವ ಮೆಡಿಕಲ್ ಕಾಲೇಜಿಗೆ ಅಗತ್ಯ ಸಿಬ್ಬಂದಿಗಳನ್ನು ಒದಗಿಸುವ ಕೇಂದ್ರವಾಗುವ ಹೆಮ್ಮೆಯನ್ನು ಸಂಸ್ಥೆ ಹೊಂದಿದೆ ಎಂದು ಅವರು ಹೇಳಿದರು. ಮಹಾಲಿಂಗೇಶ್ವರ ದೇವರ ಆಶೀರ್ವಾದ ಹಾಗೂ ಈ ಭಾಗದ ಜನರ ಸಹಕಾರವೇ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಪ್ರಗತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‌ಗೆ ಇಂಡಿಯನ್ ನರ್ಸಿಂಗ್ ಕೌನ್ಸಿಲ್, ನ್ಯೂಡೆಲ್ಲಿಯಿಂದ ಅನುಮೋದನೆ ದೊರೆತಿರುವುದು ಈ ಸಮಾರಂಭದ ಮತ್ತೊಂದು ವಿಶೇಷವಾಗಿತ್ತು. ಇದರಿಂದ ಪುತ್ತೂರು ತಾಲೂಕಿನ ಪ್ರಪ್ರಥಮ ನರ್ಸಿಂಗ್ ಕಾಲೇಜು ಎಂಬ ಗೌರವ ಈ ಸಂಸ್ಥೆಗೆ ದೊರೆತಿದೆ.
ಕಾರ್ಯಕ್ರಮದಲ್ಲಿ ಟ್ರಸ್ಟಿ ಡಾ. ಸುಧಾ ಎಸ್. ರಾವ್ ಉಪಸ್ಥಿತರಿದ್ದರು. ಟ್ರಸ್ಟಿ ಡಾ. ಸ್ಮಿತ್ ಎಸ್. ರಾವ್ ಸ್ವಾಗತಿಸಿ, ಟ್ರಸ್ಟಿ ಡಾ. ಅಭೀಶ್ ಹೆಗ್ಡೆ ವಂದಿಸಿದರು.

Leave a Reply

Your email address will not be published. Required fields are marked *