ಬೆಂಗಳೂರು: ಸರಸಕ್ಕೆ ಕರೆದು ಹಣದೋಚಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಆರ್.ಆರ್. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆಯರು ಟೆಕ್ಕಿಯೊಬ್ಬರನ್ನು ಸರಸಕ್ಕೆ ಕರೆಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಂದ ಕೂಡಲೇ ₹40,000 ನೀಡುವಂತೆ ಆರೋಪಿಗಳು ಒತ್ತಾಯಿಸಿದ್ದು, ಟೆಕ್ಕಿ ನಿರಾಕರಿಸಿದಾಗ ಸಹಚರರನ್ನು ಕರೆಸಿ ಹಲ್ಲೆ ನಡೆಸಿ ಮೊಬೈಲ್ ಫೋನ್ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ತಪ್ಪಿಸಿಕೊಂಡ ಟೆಕ್ಕಿ ಸ್ಥಳೀಯರ ಸಹಾಯದಿಂದ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರು ಟೆಕ್ಕಿ ಸೇರಿದಂತೆ ಹಲ್ಲೆ ನಡೆಸಿದ ಇಬ್ಬರು ಮಹಿಳೆಯರು ಹಾಗೂ ಅವರ ಸಹಚರರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಪ್ರಕರಣದ ಹಿಂದಿನ ಸಂಗತಿ ಬಹಿರಂಗವಾಗಿದೆ. ಡಿಸೆಂಬರ್ 10ರಂದು ಟೆಲಿಗ್ರಾಂ ಮೂಲಕ ಟೆಕ್ಕಿಗೆ ಯುವತಿಯೊಬ್ಬಳ ಪರಿಚಯವಾಗಿದ್ದು, ಆಕೆ ₹20,000 ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಟೆಕ್ಕಿ ಒಪ್ಪಿಕೊಂಡ ಬಳಿಕ ಯುವತಿಯ ಮನೆಗೆ ತೆರಳಿದಾಗ ಆತನನ್ನು ಬೆದರಿಸಿ ₹20,000 ಕಸಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಅದೇ ಯುವತಿ ತನ್ನ ಸ್ನೇಹಿತರ ಸಹಾಯದಿಂದ ಮತ್ತೆ ಟೆಕ್ಕಿಯನ್ನು ಕರೆಸಿ ಮತ್ತೊಮ್ಮೆ ₹20,000 ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.

ಈ ಸಂಬಂಧ ಟೆಕ್ಕಿ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *