ಪುತ್ತೂರು: ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿಯಾದ ಪರ್ಲಡ್ಕದ ಪಾಂಗಳಾಯಿ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ನಾಗತಂಬಿಲ, ಗ್ರಾಮ ದೈವ ಹಾಗೂ ಪರಿವಾರ ದೈವಗಳ ಪಾಂಗಳಾಯಿ ನೇಮೋತ್ಸವ ಜ.3ರಂದು ನಡೆಯಲಿದೆ ಎಂದು ದೈವಸ್ಥಾನದ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ಕಲ್ಲಿಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 17 ವರ್ಷಗಳಿಂದ ಪಾಂಗಳಾಯಿ ನೇಮೋತ್ಸವವನ್ನು ನಿರಂತರವಾಗಿ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಅರಸು ಮುಂಡ್ಯತ್ತಾಯ ಹಾಗೂ ಪರಿವಾರ ದೈವಗಳು ಅಪಘಾತ, ದುರ್ಮರಣ, ಅಗ್ನಿ ಆಕಸ್ಮಿಕ ಸೇರಿದಂತೆ ಸರ್ವ ಅವಘಡಗಳಿಂದ ಮಾನವನನ್ನು ರಕ್ಷಿಸುವ ಕಾರಣಿಕ ಶಕ್ತಿಗಳಾಗಿದ್ದು, ಭಕ್ತರ ಅಭಿಲಾಷೆಗಳನ್ನು ಈಡೇರಿಸುತ್ತಿವೆ ಎಂದು ಹೇಳಿದರು.





ಪುತ್ತೂರು ನಗರದ ಕೇಂದ್ರ ಭಾಗದಲ್ಲಿರುವ ಈ ದೈವಕ್ಷೇತ್ರದಲ್ಲಿ ಅರಸು ಮುಂಡ್ಯತ್ತಾಯ, ನಾಗದೇವರು, ನಾಗರಕ್ತೇಶ್ವರಿ, ಗುಳಿಗ, ಪಂಜುರ್ಲಿ ಹಾಗೂ ಪೊಟ್ಟನ್ ದೈವಗಳ ಸನ್ನಿಧಿಯಿದೆ. ಆರಂಭದಲ್ಲಿ ಕೇವಲ ಅರ್ಧ ಸೆಂಟ್ಸ್ ಭೂಮಿಯಲ್ಲಿದ್ದ ಈ ದೈವಕ್ಷೇತ್ರವು ಭಕ್ತರ ಸಹಕಾರದಿಂದ ಇಂದು 84 ಸೆಂಟ್ಸ್ ವಿಸ್ತೀರ್ಣಕ್ಕೆ ವೃದ್ಧಿಯಾಗಿದೆ. ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ದೇವರ ಸವಾರಿ ಪಾಂಗಳಾಯಿ ಕಟ್ಟೆಗೆ ಆಗಮಿಸುವ ಸಂಪ್ರದಾಯವಿದೆ ಎಂದು ತಿಳಿಸಿದರು.
ಪಾಂಗಳಾಯಿ ದೈವಕ್ಷೇತ್ರದಲ್ಲಿ ಪ್ರತೀ ಸಂಕ್ರಮಣ ಪೂಜೆ, ತಂಬಿಲ ಸೇವೆ, ಪತ್ತನಾಜೆ, ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಆಯುಧಪೂಜೆ, ಬಲಿಪಾಡ್ಯಮಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜೊತೆಗೆ ಮಹಿಳಾ ಭಜನಾ ಸಂಘದ ಚಟುವಟಿಕೆಗಳು ಹಾಗೂ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಅವರು ಹೇಳಿದರು.


ಕಾರ್ಯಕ್ರಮಗಳ ವಿವರ: ಜ.2ರಂದು ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಸಂಜೆ 6 ಗಂಟೆಯ ನಂತರ ದೇವತಾ ಪ್ರಾರ್ಥನೆ, ಆಚಾರ್ಯವರಣ ಹಾಗೂ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ಜ.3ರಂದು ಬೆಳಗ್ಗೆ 7.30ರಿಂದ ಗಣಹೋಮ, ಕಲಶ ಪೂಜೆ, ನಾಗತಂಬಿಲ, ಸಾಮೂಹಿಕ ಆಶ್ಲೇಷಾ ಬಲಿ, ಪಂಚಾಮೃತ ಅಭಿಷೇಕ, ದೈವಗಳಿಗೆ ಕಲಶ ತಂಬಿಲ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಲಿದ್ದು, ಅರಸು ಮುಂಡ್ಯತ್ತಾಯ, ಗುಳಿಗ, ಪಂಜುರ್ಲಿ–ಕಲ್ಲುರ್ಟಿ, ಪಟ್ಟನ್ ದೈವ ಹಾಗೂ ನಾಗರಕ್ತೇಶ್ವರಿ ನೇಮಗಳು ನೆರವೇರಲಿವೆ ಎಂದು ತಿಳಿಸಿದರು.
ಇತಿಹಾಸದ ಹಿನ್ನೆಲೆ: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪುರಾಣ ಕಥನಕ್ಕೆ ಸಂಬಂಧಿಸಿದಂತೆ, ಶ್ರೀ ಅರಸು ಮುಂಡ್ಯತ್ತಾಯ ದೈವವು ಮೂರು ದಿಕ್ಕಿನಿಂದ ಮಾನವ ರೂಪದಲ್ಲಿ ಪಾಂಗಳಾಯಿ ಮಣ್ಣಿನಲ್ಲಿ ನೆಲೆಯಾದ ದೈವವಾಗಿದ್ದು, ಶಿವಾಂಶ ಸಂಭೂತವಾಗಿ ಮಹಾಲಿಂಗೇಶ್ವರ ದೇವರಿಗೆ ಎರಡನೇ ದಂಡನಾಯಕನಾಗಿದ್ದ ಇತಿಹಾಸವಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ದೈವಸ್ಥಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರೋಜಿನಿ ಅಭಿಕಾರ್, ಮಾಜಿ ಅಧ್ಯಕ್ಷ ತಾರಾನಾಥ ರೈ, ಕೋಶಾಧಿಕಾರಿ ಜಯಶಂಕರ ರೈ, ಸದಸ್ಯರಾದ ಕರುಣಾಕರ ಆಲೆಟ್ಟಿ, ಪಿ.ಎಸ್. ರಾಜಗೋಪಾಲ ಶಗ್ರಿತ್ತಾಯ, ಪದಾಧಿಕಾರಿಗಳಾದ ಉಮಾಶಂಕರ್ ನಾಯ್ಕ ಪಾಂಗಳಾಯಿ, ಸೂರಪ್ಪ ಗೌಡ, ಸಂಪತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


