ಪುತ್ತೂರು:
ಮೆದುಳಿನ ರಕ್ತಸ್ರಾವದಿಂದ ಸುಳ್ಯದ ಯುವತಿ ಮೃತಪಟ್ಟ ದುರ್ಘಟನೆ ಸಂಭವಿಸಿದ್ದು, ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮಹತ್ವದ ನಿರ್ಧಾರ ಕೈಗೊಂಡು ಮಾನವೀಯತೆಯ ಮಾದರಿಯನ್ನು ಮೆರೆದಿದ್ದಾರೆ.
ಸುಳ್ಯ ರಥಬೀದಿ ನಿವಾಸಿ ಮಮತಾ ಅವರ ಪುತ್ರಿ ಸಿಂಧು ಮೃತಪಟ್ಟ ಯುವತಿ. ಪುತ್ತೂರು ಆದರ್ಶ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದ ಸಿಂಧು ಅವರು ಡಿಸೆಂಬರ್ 16ರಂದು ಪುತ್ತೂರಿನಿಂದ ಸುಳ್ಯಕ್ಕೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಡ್ಡಿಯರ್ ಬಳಿ ಬಸ್ನ ಸೀಟಿನಿಂದ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಆಕೆಯನ್ನು ತಕ್ಷಣ ಹಿಡಿದುಕೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು.





ಈ ವೇಳೆ ನರ ಸಂಬಂಧಿ ಸಮಸ್ಯೆ ಉಂಟಾಗಿರುವುದು ದೃಢಪಟ್ಟಿದ್ದು, ಮರುದಿನ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮೆದುಳಿನ ರಕ್ತಸ್ರಾವ ಉಂಟಾಗಿರುವುದು ಪತ್ತೆಯಾಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಕೆಲಕಾಲ ಪ್ರಜ್ಞೆ ಬಂದರೂ, ನಂತರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಸಿಂಧು ಅವರು ಕೋಮಾಗೆ ಜಾರಿದರು.
ಯಂತ್ರಗಳ ಸಹಾಯದಿಂದ ಅಂಗಾಂಗಗಳನ್ನು ಉಳಿಸಬಹುದಾದ ಸ್ಥಿತಿಯಲ್ಲಿ, ಈ ಅಂಗಾಂಗಗಳು ಇತರರಿಗೆ ಜೀವದಾನವಾಗಬಹುದು ಎಂಬ ಉದ್ದೇಶದಿಂದ ತಾಯಿ ಮಮತಾ ಅವರು ಕುಟುಂಬಸ್ಥರೊಂದಿಗೆ ಚರ್ಚಿಸಿ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಅದರಂತೆ ಮೈಸೂರಿನ ಅಪೋಲೋ ಆಸ್ಪತ್ರೆ, ನಿಟ್ಟೆ ಹೆಜ್ಜೆ ಹಾಗೂ ಕೆಎಂಸಿ ಆಸ್ಪತ್ರೆಗೆ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಮಂಗಳೂರು ಆಸ್ಪತ್ರೆಯಿಂದ ಮೈಸೂರು ಆಸ್ಪತ್ರೆಗೆ ಅಂಗಾಂಗಗಳನ್ನು ಸಾಗಿಸುವ ವೇಳೆ ಸುಳ್ಯ–ಪುತ್ತೂರು ಹೆದ್ದಾರಿಯಲ್ಲಿ ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಸುಳ್ಯದ ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು ಸಂಪೂರ್ಣ ಸಹಕಾರ ನೀಡಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದರು.
ಮೃತ ಸಿಂಧು ಅವರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದು, ಅವರ ಅಂಗಾಂಗ ದಾನ ನಿರ್ಧಾರ ಹಲವರಿಗೆ ಹೊಸ ಜೀವದಾನವಾಗಿ, ಸಮಾಜಕ್ಕೆ ಪ್ರೇರಣೆಯಾಗಿದೆ.




