ಪುತ್ತೂರು: ಕ್ರೈಸ್ತ ಧರ್ಮವು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಧರ್ಮವಾಗಿದೆ. ಏಸುಕ್ತಿಸ್ತರು ಶಾಂತಿ, ಸಹನೆ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಎತ್ತಿ ಹಿಡಿದವರಾಗಿದ್ದಾರೆ. ಅವರ ಚಿಂತನೆಗೆ ಪ್ರಪಂಚದಾದ್ಯಂತ ಹಲವರು ಪ್ರಭಾವಿತರಾಗಿದ್ದಾರೆ. ಏಸುಕ್ರಿಸ್ತರು ವೈಚಾರಿಕತೆಯೊಂದಿಗೆ ಅಹಿಂಸೆಯ ಮೂಲಕ ಜಗತ್ತನ್ನು ಶುದ್ಧೀಕರಿಸುವ ಕೆಲಸ ಮಾಡಿದ್ದಾರೆ. ಎರಡು ಸಾವಿರ ವರ್ಷಗಳ ಹಿಂದೆ ಗೋದಲಿಯಲ್ಲಿ ಹುಟ್ಟಿದ ಏಸುಕ್ತಿಸ್ತರು ಜಗತ್ತಿನಾದ್ಯಂತ ಮಾನ್ಯತೆ ಪಡೆದುಕೊಂಡರು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಝೇವಿಯರ್ ಡಿಸೋಜ ಹೇಳಿದರು.

ಕ್ರಿಶ್ಚಿಯನ್ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಪುತ್ತೂರು ನಗರದಲ್ಲಿಭವ್ಯ ಮೆರವಣಿಗೆ ನಡೆಯಿತು.

ಮೆರವಣಿಗೆಗೆ ಪುತ್ತೂರಿನ ದರ್ಬೆಯಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಝೇವಿಯರ್ ಡಿಸೋಜ, ಹಿರಿಯ ನ್ಯಾಯವಾದಿ ಪಿ.ಕೆ. ಸತೀಶನ್ ಮತ್ತು ಪತ್ರಕರ್ತ ಸಂಶುದ್ಧೀನ್ ಸಂಪ್ಯ ಬಲೂಲ್ ಹಾರಿಸುವ ಮೂಲಕ ಚಾಲನೆ ನೀಡಿದರು.

ಹಿರಿಯ ನ್ಯಾಯವಾದಿ ಪಿ.ಕೆ. ಸತೀಶನ್ ಮಾತನಾಡಿ ಸರ್ವ ಧರ್ಮಿಯನ್ನು ಕರೆಸಿಕೊಂಡು ನಡೆಸುತ್ತಿರುವ ಈ ಕಾರ್ಯಕ್ರಮವು ಶೋಷಣೆಯ ವಿರುದ್ದದ ಚಳುವಳಿಯ ಭಾಗವಾಗಿದೆ. ನಮ್ಮೆಲ್ಲರಲ್ಲಿ ಇರುವುದು ಒಂದೇ ರಕ್ತ ಅದು ಮಾನವೀಯ ರಕ್ತವಾಗಿದೆ. ಮಾನವೀಯತೆ ಉಳಿದಿದೆ ಎಂಬುದಕ್ಕೆ ಇಂತಹ ಕಾರ್ಯಕ್ರಮಗಳು ಸಾಕ್ಷಿಯಾಗುತ್ತದೆ ಎಂದರು.

ಪತ್ರಕರ್ತ ಸಂಶುದ್ಧೀನ್ ಸಂಪ್ಯ ಮಾತನಾಡಿ ಪ್ರಪಂಚದಾದ್ಯಂತ ಧರ್ಮಗಳ ಹೆಸರಿನಲ್ಲಿ ಧ್ವೇಷ, ಅಸೂಯೆಗಳು ಹೊತ್ತಿ ಉರಿಯುತ್ತಿರುವ ಇಂದಿನ ದಿನಗಳಲ್ಲಿ ಮಾನವೀಯ ಸಂಬಂಧಗಳನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ನಡೆಸುವುದು ಅನಿವಾರ್ಯವಾಗಿದೆ. ನಮ್ಮ ರಕ್ತದಲ್ಲಿ, ಮನಸ್ಸುಗಳಲ್ಲಿ ಬೇಧವಿಲ್ಲ. ಆದರೆ ಹೊರಗಿನಿಂದ ನಮ್ಮ ನಡುವೆ ಬೇಧಗಳನ್ನು ಧ್ವೇಷಗಳನ್ನು ಹೇರುವ ಮೂಲಕ ನಮ್ಮ ನಡುವೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಅದನ್ನು ತಡೆಯುವಲ್ಲಿ ಇಂತಹ ಸೌಹಾರ್ದ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.

ಕ್ರಿಸ್ಮಸ್ ಮೆರವಣಿಗೆಯು ದರ್ಬೆಯಿಂದ ಹೊರಟು ನಗರದ ಮುಖ್ಯ ರಸ್ತೆಯಲ್ಲಿ ಕಲ್ಲಾರೆ ಮೂಲಕ ಸಾಗಿ ಬಸ್ ನಿಲ್ದಾಣ ಬಳಿಯ ಗಾಂಧಿ ಕಟ್ಟೆಯ ಮುಂಭಾಗದಲ್ಲಿ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ಕಲ್ಲಡ್ಕ ಗೊಂಬೆಗಳು, ಡಿ.ಕೆ., ನಾಸಿಕ್ ಬ್ಯಾಂಡ್, ಸಾಂತಾಕ್ಲಾಸ್ ವೇಷಧಾರಿಗಳು, ಸ್ತಬ್ಧ ಚಿತ್ರಗಳು ಪಾಲ್ಗೊಂಡಿದ್ದವು.

ಇದೆ ಸಂದರ್ಭದಲ್ಲಿ ಕ್ರಿಶ್ಚಿಯನ್ ಹಬ್ಬಗಳ ಆಚರಣಾ ಸಮಿತಿಯ ಹಿರಿಯ ಸದಸ್ಯ ಮೌರಿಸ್ ಮಸ್ಕರೇನಸ್, ಸಮಿತಿಯ ಸದಸ್ಯರಾದ ಸೋನಾಲ್ ಲೋಬೋ,ಅರುಣ್ ಪಿಂಟೋ, ರೋಶನ್ ಲಸ್ರಾದೋ,ಸಂತೋಷ್ ಮೋರಸ್, ವಿನ್ಸೆಂಟ್ ತಾವ್ರೋ, ವಿಲ್‍ರಾಯ್ ಡಿಸೋಜ ಸಿದ್ಯಾಳ, ರೋಶನ್ ಡಯಾಸ್, ಲ್ನಾನ್ಸಿ ಮಸ್ಕರೇನ್ಹಸ್, ಶಾನ್ ರೆಬೆಲ್ಲೋ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *