ಪದಗ್ರಹಣ, ಸಾಧಕರಿಗೆ ಗೌರವ
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ಯುವ ಗೌಡ ಸಂಘ, ಗೌಡ ಮಹಿಳಾ ಸಂಘ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ಗಳ ಸಹಯೋಗದಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕ ಕಾರ್ಯಕ್ರಮ ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಮಂದಿ ಸಾಧಕರಿಗೆ ಸಾಧನ ಪ್ರಶಸ್ತಿ ಪ್ರದಾನ ನಡೆಯಿತು.

ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಶ್ರೀ ಸತ್ಯನಾರಾಯಣ ಪೂಜಾ ಪ್ರಸಾದ ಸ್ವೀಕರಿಸಿ, ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಪರಿವರ್ತನೆ ಅಗತ್ಯವಿದ್ದು, ಅದು ಮನಸ್ಸಿನಿಂದ ಆರಂಭವಾಗಬೇಕು. ಯುವಕರು ಹಾಗೂ ಮಕ್ಕಳು ಸಾಮಾಜಿಕ ಪರಿವರ್ತನೆಯ ವಾಹಕರಾಗಬೇಕು. ತಾಲೂಕಿನಲ್ಲಿ ಹೆಚ್ಚು ಸದಸ್ಯತ್ವ ಬೆಳೆಸುವ ಮೂಲಕ ಸಂಘಟನೆ ಬಲಿಷ್ಠವಾಗಬೇಕು. ಮುಂದಿನ ದಿನಗಳಲ್ಲಿ ವಿದ್ಯಾಕೇಂದ್ರ, ವಿದ್ಯಾಸಂಸ್ಥೆ ಹಾಗೂ ಹಾಸ್ಟೆಲ್ ಸ್ಥಾಪನೆ ಅಗತ್ಯವಿದೆ ಎಂದು ಸ್ವಾಮೀಜಿಯವರು ಹೇಳಿದರು.

ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಯುವ ಸಮುದಾಯವೇ ದೇಶದ ಶಕ್ತಿ. ಗೌಡ ಸಮುದಾಯದಲ್ಲೂ ಯುವ ಸಮೂಹ ಹೆಚ್ಚು ಇರುವುದರಿಂದ ಸಂಘಟನೆಗೆ ಭವಿಷ್ಯವಿದೆ. ಸ್ವಾಭಿಮಾನ, ಸ್ವಾವಲಂಬನೆ ಮತ್ತು ಸಂಘಟನೆಯ ಮೂಲಕ ಸಮಾಜದ ಅಸ್ತಿತ್ವ ಉಳಿಯಬೇಕು. ಹಿರಿಯರು ಕಟ್ಟಿದ ಸಂಘಟನೆ ಇಂದು ಫಲ ನೀಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.




ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಮಹಿಳಾ ಸಂಘ ಹಾಗೂ ಯುವ ಸಂಘದ ನೂತನ ಪದಾಧಿಕಾರಿಗಳಿಗೆ ಸ್ವಾಮೀಜಿಯವರು ಪದಪ್ರದಾನ ಮಾಡಿದರು. ಜೊತೆಗೆ ಪುತ್ತೂರು, ಬನ್ನೂರು, ಉಪ್ಪಿನಂಗಡಿ, ಕುಂಬ್ರ, ಮುಂಡೂರು ಹಾಗೂ ಈಶ್ವರಮಂಗಲ ವಲಯಗಳ ಅಧ್ಯಕ್ಷರು–ಕಾರ್ಯದರ್ಶಿಗಳಿಗೆ ಆಯಾ ವಲಯದ ಬಣ್ಣದ ಧ್ವಜ ಹಸ್ತಾಂತರಿಸಿ ಜವಾಬ್ದಾರಿ ವಹಿಸಲಾಯಿತು. ಇದೇ ವೇಳೆ ಸಂಘದ ನಿರ್ಗಮಿತ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.
ಸಾಧನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಹಕಾರ, ಸಾಮಾಜಿಕ, ಉದ್ಯಮ, ವೈದ್ಯಕೀಯ, ಶಿಕ್ಷಣ, ಪತ್ರಿಕೋದ್ಯಮ ಹಾಗೂ ವಿಶೇಷ ಪ್ರತಿಭೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಮಂದಿ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಜೊತೆಗೆ ರಾಷ್ಟ್ರಮಟ್ಟದ ಈಜು ಪ್ರತಿಭೆ ದಿಗಂತ್ ಪಿ.ಎಸ್ ಹಾಗೂ ಸಮಾಜಸೇವೆಯಿಂದ ಗುರುತಿಸಿಕೊಂಡ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮ ಪೆರ್ಲಂಪಾಡಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಏಷ್ಯನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಗಾಂಧಾರಿ ವಿದ್ಯೆ ಪ್ರವೀಣೆ ಶಮಿಕಾ ಹಿರೇಬಂಡಾಡಿ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರ ಬಿಡಿಸುವ ಪ್ರದರ್ಶನ ನೀಡಿದರು. ಬೆಳಿಗ್ಗೆ ಗಣಪತಿ ಹವನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನಿರೀಕ್ಷೆಗೂ ಮೀರಿ ಸಮಾಜಬಾಂಧವರು ಆಗಮಿಸಿ ಸಮುದಾಯ ಭವನ ತುಂಬಿ ತುಳುಕಿದ ದೃಶ್ಯ ಕಂಡುಬಂದಿತು.
ವೇದಿಕೆಯಲ್ಲಿ ಸಂಘದ ನೂತನ ಹಾಗೂ ನಿರ್ಗಮಿತ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.


