ಕಡಬ: ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿರುವ ಬಾರ್‌ನಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬನು ಹಣಕಾಸು ವ್ಯವಹಾರದಲ್ಲಿ ವಂಚನೆ ನಡೆಸಿ ಪರಾರಿಯಾದ ಘಟನೆಗೆ ಸಂಬಂಧಿಸಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪಿರ್ಯಾದಿದಾರರಾದ ವಿಶಾಲ್ ಸ್ಟೀಫನ್ (25), ಬಿಳಿನೆಲೆ ಗ್ರಾಮ, ಕಡಬ ಅವರು ನೀಡಿದ ದೂರಿನಂತೆ, ಅವರ ತಾಯಿಗೆ ಸೇರಿರುವ ಬಾರ್‌ನಲ್ಲಿ ಕಡಬದ ಹುಂಚಪ್ಪಡಿ ನಿವಾಸಿ ಹರ್ಷಿತ್ ಬಿ.ಕೆ. ಎಂಬಾತನು ಕಳೆದ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ದಿನನಿತ್ಯದ ಹಣಕಾಸು ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದನು.
ದಿನಾಂಕ 21-12-2025ರಂದು ರಾತ್ರಿ ಬಾರ್‌ನ ವಹಿವಾಟು ಪರಿಶೀಲಿಸಿದ ವೇಳೆ ಹಣಕಾಸು ವ್ಯತ್ಯಾಸ ಕಂಡುಬಂದಿದ್ದು, ಈ ಬಗ್ಗೆ ಹರ್ಷಿತ್ ಬಳಿ ವಿಚಾರಿಸಿದಾಗ ಮರುದಿನ 22-12-2025ರಂದು ಎಲ್ಲವೂ ಸರಿಯಾಗಲಿದೆ ಹಾಗೂ ನಗದನ್ನು ಬ್ಯಾಂಕಿಗೆ ಜಮೆ ಮಾಡುವುದಾಗಿ ತಿಳಿಸಿದ್ದಾನೆ. ಆದರೆ ಮರುದಿನ ಹಣ ಬ್ಯಾಂಕಿಗೆ ಜಮೆಯಾಗಿರದ ಹಿನ್ನೆಲೆಯಲ್ಲಿ ಪಿರ್ಯಾದಿದಾರರು ಆತನ ವಾಸ್ತವ್ಯವಿದ್ದ ಕೊಠಡಿಗೆ ತೆರಳಿದಾಗ ಆತ ನಾಪತ್ತೆಯಾಗಿರುವುದು ಗೊತ್ತಾಗಿದೆ.

ಮುಂದೆ ಪರಿಶೀಲನೆ ನಡೆಸಿದಾಗ, ಸ್ಟಾಕ್ ರೂಮ್ನಲ್ಲಿದ್ದ ಸುಮಾರು ₹6,57,104 ಮೌಲ್ಯದ ಮದ್ಯವನ್ನು ಈ ಮೊದಲೇ ಮಾರಾಟ ಮಾಡಿ, ಆ ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡದೇ ವಂಚನೆ ಮಾಡಿರುವುದು ಹಾಗೂ ದಿನಾಂಕ 21-12-2025ರಂದು ವ್ಯಾಪಾರದ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 94/2025 ಕಲಂ 303(2), 314, 316(4) BNS–2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *