ಪುತ್ತೂರು:
ಹೆಜಮಾಡಿಯಲ್ಲಿ ನಡೆದ ಬ್ರಹ್ಮ ಬೈದರ್ಕಲ ಗರಡಿ ಜಾತ್ರೆಯ ವೇಳೆ ವೃದ್ಧೆಯೊಬ್ಬರ ಚಿನ್ನದ ಸರ ಕಳವು ಮಾಡಿದ್ದ ಆರೋಪಿಗಳು, ಕೆಮ್ಮಿಂಜೆ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲೂ ಕೈಚಳಕ ತೋರಿಸಲು ಯತ್ನಿಸಿದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಪೊಲೀಸರ ವಶವಾಗಿರುವ ಘಟನೆ ವರದಿಯಾಗಿದೆ.





ತಮಿಳುನಾಡಿನ ಕೃಷ್ಣಗಿರಿ ನಿವಾಸಿಗಳಾದ ಮಾರಿ, ಕಶ್ಯಮ್ಮ ಹಾಗೂ ಶೀತಲ್ ಎಂಬವರು ಪೊಲೀಸರ ವಶದಲ್ಲಿರುವ ಆರೋಪಿಗಳು. ಹೆಜಮಾಡಿಯಲ್ಲಿ ಜಾತ್ರೆಯ ದಿನ ವೃದ್ಧೆಯೊಬ್ಬರ ಚಿನ್ನದ ಸರ ಕಳವು ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.


ಈ ವೈರಲ್ ವಿಡಿಯೋವನ್ನು ಗಮನಿಸಿದ್ದ ಕೆಮ್ಮಿಂಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರೊಬ್ಬರು, ದೇವಸ್ಥಾನ ಕಾರ್ಯಕ್ರಮದ ಸಂದರ್ಭ ಈ ಮೂವರು ಮಹಿಳೆಯರನ್ನು ಗುರುತಿಸಿದ್ದಾರೆ. ತಕ್ಷಣ ಸಾರ್ವಜನಿಕರ ಸಹಕಾರದೊಂದಿಗೆ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಈ ನಡುವೆ ಚಿನ್ನ ಕಳವುಗೊಳಗಾದ ಮಹಿಳೆಯರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


