ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದಲ್ಲಿ ಸ್ವಂತ ಕಾರಿಗೆ ಅಕ್ರಮವಾಗಿ ಪೊಲೀಸ್ ಬೋರ್ಡ್ ಅಳವಡಿಸಿಕೊಂಡು ಪ್ರವಾಸಕ್ಕೆ ತೆರಳುತ್ತಿದ್ದ ಪೊಲೀಸ್ ಕುಟುಂಬದ ಕಾರನ್ನು ತಡೆದು, ಕಾನೂನು ಉಲ್ಲಂಘನೆಗಾಗಿ ದಂಡ ವಿಧಿಸಿದ ಘಟನೆ ನಡೆದಿದೆ.

ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಟಿದ್ದ ಪೊಲೀಸ್ ಒಬ್ಬರು ತಮ್ಮ ಖಾಸಗಿ ಕಾರಿಗೆ “ಪೋಲಿಸ್” ಬೋರ್ಡ್ ಅಳವಡಿಸಿಕೊಂಡು ಪ್ರಯಾಣಿಸುತ್ತಿದ್ದರು. ಕೊಟ್ಟಿಗೆಹಾರದ ಚಿಕ್ಕ ಪೋಸ್ಟರ್ ಬಳಿ ನಡೆದ ನಿಯಮಿತ ಪೊಲೀಸ್ ತಪಾಸಣೆಯ ವೇಳೆ ಕಾರಿನ ಮೇಲೆ ಪೊಲೀಸ್ ಬೋರ್ಡ್ ಕಂಡುಬಂದ ಹಿನ್ನೆಲೆಯಲ್ಲಿ ಬಣಕಲ್ ಪೊಲೀಸ್ ಠಾಣೆಯ ಪಿಎಸ್ಐ ರೇಣುಕಾ ಅವರು ಕಾರನ್ನು ತಡೆದರು.





ವಿಚಾರಣೆ ವೇಳೆ ಕಾರು ಖಾಸಗಿಯದ್ದಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಬಳಸಲಾಗುತ್ತಿಲ್ಲ ಎಂಬುದು ದೃಢಪಟ್ಟಿತು. ಐಡಿ ಕಾರ್ಡ್ ತೋರಿಸಿದರೂ ಯಾವುದೇ ರಿಯಾಯಿತಿ ನೀಡದೆ, ಪೊಲೀಸ್ ಬೋರ್ಡ್ ತೆಗೆಸಿಸಿ ಕಾನೂನು ಪ್ರಕಾರ ದಂಡ ವಿಧಿಸಲಾಯಿತು. ಸರ್ಕಾರಿ ಸಿಬ್ಬಂದಿಗಳು ತಮ್ಮ ಖಾಸಗಿ ವಾಹನಗಳಿಗೆ ಪೊಲೀಸ್ ಇಲಾಖೆಯ ಗುರುತು ಅಥವಾ ಬೋರ್ಡ್ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಪಿಎಸ್ಐ ಅವರು ಸ್ಪಷ್ಟಪಡಿಸಿದರು.
ಕಾನೂನನ್ನು ಎಲ್ಲರಿಗೂ ಸಮಾನವಾಗಿ ಅನ್ವಯಿಸಿ, ತಪ್ಪು ಮಾಡಿದ ಪೊಲೀಸ್ ಸಿಬ್ಬಂದಿಗೂ ದಂಡ ವಿಧಿಸಿದ ಬಣಕಲ್ ಪಿಎಸ್ಐ ರೇಣುಕಾ ಅವರ ಕರ್ತವ್ಯ ನಿಷ್ಠೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




