ಕಡಬ, ಡಿ.28: ಶ್ರವಣ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರು ನಿಯಮಿತವಾಗಿ ಕಿವಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕಡಬದ ಹಿರಿಯ ವೈದ್ಯರಾದ ಡಾ. ಸಿ.ಕೆ. ಶಾಸ್ತ್ರಿಯವರು ಕರೆ ನೀಡಿದರು.

ಅವರು ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಅವರ ಸಹಯೋಗದಲ್ಲಿ ಭಾನುವಾರ ಕಡಬದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾದ ಉಚಿತ ಕಿವಿ ಶ್ರವಣ ತಪಾಸಣಾ ಶಿಬಿರ ಹಾಗೂ ಶ್ರವಣ ಯಂತ್ರಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಅಲ್ಪ ವಯಸ್ಸಿನಲ್ಲೇ ಶ್ರವಣ ದೋಷ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಶ್ರವಣ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಾಗುತ್ತದೆ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಶ್ರವಣ ದೋಷಕ್ಕೆ ಸೂಕ್ತ ಚಿಕಿತ್ಸೆಗಳು ಲಭ್ಯವಿರುವುದರಿಂದ ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಟೀಮ್ ಈಶ್ವರ್ ಮಲ್ಪೆ ಸಂಘಟನೆಯ ಸಂಚಾಲಕರಾದ ಲವ್ ಬಂಗೇರ ಮಾತನಾಡಿ, ನಮ್ಮ ಸಂಘಟನೆಯ ಮೂಲಕ ಆಯೋಜಿಸಲಾದ ಇದು 68ನೇ ಶಿಬಿರವಾಗಿದ್ದು, ಇದುವರೆಗೆ ಸಾವಿರಾರು ಜನರು ಈ ಶಿಬಿರಗಳಿಂದ ಪ್ರಯೋಜನ ಪಡೆದಿದ್ದಾರೆ. ಶ್ರವಣ ಸಮಸ್ಯೆಗೆ ಸಂಬಂಧಿಸಿದ ಶಿಬಿರಗಳು ವಿರಳವಾಗಿದ್ದು, ಪತ್ರಕರ್ತರ ಸಂಘದ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಟೀಮ್ ಈಶ್ವರ್ ಮಲ್ಪೆ ತಂಡದ ವೈದ್ಯಾಧಿಕಾರಿಗಳಾದ ಡಾ. ಪವನ್, ಡಾ. ಉದಯನ್ ಹಾಗೂ ಕಡಬ ತಾಲೂಕು ಪತ್ರಕರ್ತರ ಸಂಘದ ನಿಯೋಜಿತ ಅಧ್ಯಕ್ಷರಾದ ಕೆ.ಎಸ್. ಬಾಲಕೃಷ್ಣ ಕೊಯಿಲ ಉಪಸ್ಥಿತರಿದ್ದರು. ನಿಯೋಜಿತ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ವಂದಿಸಿದರು.

Leave a Reply

Your email address will not be published. Required fields are marked *