ಪುತ್ತೂರು ಟೌನ್ ಬ್ಯಾಂಕ್‌ನ ಸಣ್ಣ ಕೊಠಡಿಯಲ್ಲಿ ‘ಪುತ್ತೂರು ತಾಲೂಕು ಮಹಿಳೆಯರ ಗ್ರಾಹಕ ಸಹಕಾರಿ ಸಂಘ’ ಎಂಬ ಹೆಸರಿನಿಂದ ಆರಂಭಗೊಂಡು, ಇಂದು ‘ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ’ವಾಗಿ ಗುರುತಿಸಿಕೊಂಡಿರುವ ಸಂಸ್ಥೆ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ನಿಂತಿದೆ. ಡಿಸೆಂಬರ್ 31ರಂದು ಸುವರ್ಣ ಮಹೋತ್ಸವದ ಉದ್ಘಾಟನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷ ಪ್ರತಿ ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಘದ ಹಿರಿಯರು ಹಾಗೂ ಮಾಜಿ ನಿರ್ದೇಶಕಿ ವತ್ಸಲಾ ರಾಜ್ನಿ ಮತ್ತು ಅಧ್ಯಕ್ಷೆ ಗೌರಿ ಬನ್ನೂರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ‘ಸ್ವಸ್ಥ ಸಮಾಜಕ್ಕೆ ಮಹಿಳೆಯರ ಸಹಕಾರ’ ವಿಷಯದ ಕುರಿತು ವಿಠಲ ನಾಯಕ್ ಕಲ್ಲಡ್ಕ ಅವರಿಂದ ಉಪನ್ಯಾಸ ನಡೆಯಲಿದೆ ಎಂದರು.

ಬೆಳಿಗ್ಗೆ 11.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸುವರ್ಣ ಮಹೋತ್ಸವವನ್ನು ಉದ್ಘಾಟಿಸಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರು ‘ಸಹಕಾರ ಜ್ಯೋತಿ’ ಮಹಿಳಾ ಸ್ವಸಹಾಯ ಸಂಘಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಧನಾದೇಶ ವಿತರಣೆ ಮಾಡಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ. ರಘು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಘದ ಬೆಳವಣಿಗೆ ಪಯಣ
1975–76ರ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಸಂದರ್ಭದಲ್ಲಿ ಪುಷ್ಪಾ ರೈ ಮತ್ತು ತಂಡದ ದೂರದೃಷ್ಟಿಯ ಫಲವಾಗಿ ಆರಂಭವಾದ ಈ ಸಂಘವು, ಅಂದಿನ ಪುತ್ತೂರು ತಾಲೂಕಿನ 58 ಗ್ರಾಮ ಪಂಚಾಯತ್‌ಗಳ 708 ಸದಸ್ಯರ 16,260 ರೂ. ಪಾಲು ಬಂಡವಾಳ ಮತ್ತು ಸರ್ಕಾರದ 10,000 ರೂ. ಪಾಲು ಬಂಡವಾಳದೊಂದಿಗೆ ಕಾರ್ಯಾರಂಭ ಮಾಡಿತ್ತು. ಬಳಿಕ ನಿರಂತರ ಪ್ರಗತಿ ಸಾಧಿಸಿ ಸ್ವಂತ ನಿವೇಶನದಲ್ಲಿ ಹಲವು ಶಾಖೆಗಳನ್ನು ತೆರೆಯುವ ಮೂಲಕ ಇಂದು ಸುವರ್ಣ ಮಹೋತ್ಸವ ಸಂಭ್ರಮಕ್ಕೆ ತಲುಪಿದೆ.
ಪ್ರಾರಂಭದ ದಿನಗಳಲ್ಲಿ ತಾಲೂಕಿನ ಏಕೈಕ ಮಹಿಳಾ ಸಹಕಾರಿ ಸಂಘವಾಗಿ ಕಾರ್ಯಾರಂಭ ಮಾಡಿದ ಈ ಸಂಸ್ಥೆ, ಕಳೆದ ಐದು ದಶಕಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 3,606 ಸದಸ್ಯರ ವಿಶ್ವಾಸಾರ್ಹ ಶಕ್ತಿಯೊಂದಿಗೆ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ಲಾಭಕ್ಕಿಂತ ಸೇವೆಯನ್ನು ಧ್ಯೇಯವಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ಸಂಘವು, ದರ್ಬೆಯಲ್ಲಿ 5 ಸೆಂಟ್ಸ್ ಜಾಗದಲ್ಲಿ ಬ್ಯಾಂಕ್ ವಿಭಾಗ ಆರಂಭಿಸಿತ್ತು.
ದಶಮಾನೋತ್ಸವದ ಸಂದರ್ಭದಲ್ಲಿ ಮೊಳಹಳ್ಳಿ ಶಿವರಾಯ ವೃತ್ತದ ಬಳಿ 4 ಸೆಂಟ್ಸ್ ಜಾಗದಲ್ಲಿ ಭವ್ಯ ಕಟ್ಟಡ ನಿರ್ಮಿಸಿ, ಬ್ಯಾಂಕಿಂಗ್ ಜೊತೆಗೆ ಜವಳಿ ಮಳಿಗೆ, ಲೇಖನ ಸಾಮಗ್ರಿ, ಗ್ರಾಹಕ ಸಾಮಗ್ರಿಗಳ ವಿತರಣೆ, ನ್ಯಾಯಬೆಲೆ ಅಂಗಡಿ ಹಾಗೂ ಇ-ಸ್ಟ್ಯಾಂಪಿಂಗ್ ಸೇವೆಗಳನ್ನು ಆರಂಭಿಸಲಾಗಿದೆ. 1988–89ರಲ್ಲಿ ಕಬಕ ನೆಹರುನಗರದಲ್ಲಿ ಮತ್ತೊಂದು ನ್ಯಾಯಬೆಲೆ ಅಂಗಡಿ, 25 ವರ್ಷ ಪೂರೈಸಿದ ಸಂದರ್ಭದಲ್ಲಿ ಚಿಕ್ಕಮುಡ್ನೂರು ಜಿಡೆಕಲ್ಲಿನಲ್ಲಿ 4 ಸೆಂಟ್ಸ್ ಜಾಗ, 2015–16ರಲ್ಲಿ ಉಪ್ಪಿನಂಗಡಿಯಲ್ಲಿ ಶಾಖೆ, 2023–24ರಲ್ಲಿ ಕಾಣಿಯೂರಿನಲ್ಲಿ ಐದನೇ ಶಾಖೆ ಆರಂಭಿಸಲಾಗಿದೆ.
2024–25ನೇ ಆರ್ಥಿಕ ವರ್ಷದಲ್ಲಿ ಸಂಘವು ರೂ.111.33 ಕೋಟಿಗೂ ಅಧಿಕ ವಾರ್ಷಿಕ ವಹಿವಾಟು ನಡೆಸಿದ್ದು, ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಡಿಸೆಂಬರ್ 2025ರವರೆಗೆ 9 ತಿಂಗಳ ಅವಧಿಯಲ್ಲಿ ರೂ.96.71 ಕೋಟಿ ವ್ಯವಹಾರ ನಡೆಸಿ ಆರ್ಥಿಕವಾಗಿ ಸದೃಢವಾಗಿ ಬೆಳೆದಿದೆ. ಸಂಘದ ಎಲ್ಲಾ ಚಟುವಟಿಕೆಗಳು ಸಂಪೂರ್ಣವಾಗಿ ಮಹಿಳಾ ಸದಸ್ಯರಿಂದಲೇ ಸಮರ್ಥವಾಗಿ ನಿರ್ವಹಿಸಲ್ಪಡುತ್ತಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಇಂದಿರಾ ಬಿ.ಕೆ., ನಿರ್ದೇಶಕರಾದ ಮೋಹಿನಿ ಪಿ. ನಾಯ್ಕ, ಜಯಶ್ರೀ ಎಸ್. ಶೆಟ್ಟಿ, ಉಷಾ ಮುಳಿಯ, ವಿಜಯಲಕ್ಷ್ಮೀ, ದೀಕ್ಷಾ ಪೈ ಹಾಗೂ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಎಸ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *