ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿರುವ ಚಿನ್ನ–ಬೆಳ್ಳಿ ಕುಲಕಸುಬುದಾರರ (ಅಕ್ಕಸಾಲಿಗರ) ಕುರಿತು ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿರುವ ಉತ್ತರ ನಿರಾಶಾದಾಯಕವಾಗಿದ್ದು, ಈ ಪಾರಂಪರಿಕ ವೃತ್ತಿಯನ್ನು ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ಕುಟುಂಬಗಳ ಭರವಸೆಗೆ ಧಕ್ಕೆ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಸುಮಾರು 1.00 ಲಕ್ಷಕ್ಕೂ ಅಧಿಕ ಕುಟುಂಬಗಳು ಚಿನ್ನ-ಬೆಳ್ಳಿ ಕುಲಕಸಬನ್ನು ಜೀವನಾಧಾರವಾಗಿ ಮಾಡಿಕೊಂಡಿದ್ದರೂ, ಸರ್ಕಾರವು ಇದುವರೆಗೆ ಕೇವಲ 15,933 ಕಾರ್ಮಿಕರನ್ನು ಮಾತ್ರ “ಅಕ್ಕಸಾಲಿಗರು” ಎಂಬ ವರ್ಗದಡಿ ನೋಂದಾಯಿಸಿರುವುದು ವಾಸ್ತವ ಸ್ಥಿತಿಗೆ ದೂರವಾಗಿದೆ. ಇದು ಸರ್ಕಾರದ ದಾಖಲಾತಿ ಪ್ರಕ್ರಿಯೆಯಲ್ಲಿನ ನಿಧಾನಗತಿ ಮತ್ತು ಅಸಂಘಟಿತ ಕಾರ್ಮಿಕರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅವರು ಹೇಳಿದರು.

ಅಪಘಾತ ಪರಿಹಾರ ಹಾಗೂ ಅಂತ್ಯಕ್ರಿಯೆ ಸಹಾಯದಂತಹ ಸೀಮಿತ ಸೌಲಭ್ಯಗಳನ್ನು ಮಾತ್ರ ಒದಗಿಸಲಾಗುತ್ತಿದೆ ಎಂಬ ಉತ್ತರ ಬಂದಿದೆ. ಆದರೆ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಸಾಕಾಗುವುದಿಲ್ಲ. ಬೆಲೆ ಏರಿಕೆ, ಕಚ್ಚಾ ವಸ್ತುಗಳ ದುಬಾರಿ ದರ, ಮಾರುಕಟ್ಟೆ ಅಸ್ಥಿರತೆ ಮತ್ತು ತಂತ್ರಜ್ಞಾನ ಸ್ಪರ್ಧೆಯ ನಡುವೆ ಹೋರಾಡುತ್ತಿರುವ ಚಿನ್ನ–ಬೆಳ್ಳಿ ಕುಲಕಸುಬುದಾರರಿಗೆ ಬಡ್ಡಿರಹಿತ ಅಥವಾ ಸಬ್ಸಿಡಿ ಸಾಲ, ಸಮಗ್ರ ಆರೋಗ್ಯ ವಿಮೆ, ಮಕ್ಕಳ ವೃತ್ತಿಪರ ಶಿಕ್ಷಣಕ್ಕೆ ಕಡಿಮೆ ಬಡ್ಡಿದರದ ಸಾಲಗಳಂತಹ ದೀರ್ಘಕಾಲೀನ ಭದ್ರತಾ ಸೌಲಭ್ಯಗಳು ಅತ್ಯಾವಶ್ಯಕವಾಗಿವೆ ಎಂದು ಶಾಸಕ ಕಿಶೋರ್ ಕುಮಾರ್ ಪುತ್ತೂರು ಅಭಿಪ್ರಾಯಪಟ್ಟರು.

ಆದರೆ ಸರ್ಕಾರದ ಉತ್ತರದಲ್ಲಿ ಈ ಕುರಿತು “ಯಾವುದೇ ಪ್ರಸ್ತಾವನೆ ಇಲ್ಲ” ಎಂದು ಹೇಳಿರುವುದು ಅತ್ಯಂತ ವಿಷಾದನೀಯ. ಕಟ್ಟಡ ಕಾರ್ಮಿಕರಿಗೆ ನೀಡಲಾಗುತ್ತಿರುವ ಅನೇಕ ಸೌಲಭ್ಯಗಳನ್ನು ಪಾರಂಪರಿಕ ಕುಲಕಸುಬು ನಿರ್ವಹಿಸುವ ಅಕ್ಕಸಾಲಿಗರಿಗೆ ನೀಡಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಇದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದರು.

ಕೇವಲ ಪರಿಹಾರ ಧನ ನೀಡಿದರೆ ಸಾಲದು. ಕುಲಕಸುಬುದಾರರು ಸ್ವಾವಲಂಬಿಯಾಗಿ ಬದುಕಲು ಆರ್ಥಿಕ ಚೈತನ್ಯದ ಅವಶ್ಯಕತೆ ಇದೆ. “ಕಟ್ಟಡ ಕಾರ್ಮಿಕರಿಗೆ ಸಿಗುವಂತೆ ಬಡ್ಡಿರಹಿತ ಸಾಲ, ಮಕ್ಕಳ ಶಿಕ್ಷಣಕ್ಕೆ ನೆರವು ಮತ್ತು ಆರೋಗ್ಯ ವಿಮೆ ಸೌಲಭ್ಯಗಳನ್ನು ಅಕ್ಕಸಾಲಿಗರಿಗೂ ನೀಡಬೇಕೆಂದು ನಾನು ಪ್ರಬಲವಾಗಿ ಒತ್ತಾಯಿಸಿದ್ದೆ. ಆದರೆ, ಪ್ರಸ್ತುತ ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ನಾನು ಖಂಡಿಸುತ್ತೇನೆ,” ಎಂದು ಕಿಶೋರ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿನ್ನ–ಬೆಳ್ಳಿ ಉದ್ಯಮಿಗಳು ಮತ್ತು ಕುಲಕಸುಬುದಾರರಿಗೆ ಭರವಸೆ ನೀಡುತ್ತಾ ಅವರು,
“ನಾನು ಈ ವಿಷಯದಲ್ಲಿ ಸರ್ಕಾರದ ಮೇಲೆ ನಿರಂತರ ಒತ್ತಡ ತಂದು, ಬಡ್ಡಿರಹಿತ ಸಾಲ, ಆರೋಗ್ಯ ವಿಮೆ, ಮಕ್ಕಳ ಶಿಕ್ಷಣ ನೆರವು ಸೇರಿದಂತೆ ಸಮಗ್ರ ಕಲ್ಯಾಣ ಪ್ಯಾಕೇಜ್ ಜಾರಿಯಾಗುವವರೆಗೆ ಪ್ರಯತ್ನವನ್ನು ಮುಂದುವರಿಸುತ್ತೇನೆ. ಅಕ್ಕಸಾಲಿಗರ ಹಿತಾಸಕ್ತಿಯನ್ನು ಕಾಪಾಡುವುದು ನನ್ನ ಕರ್ತವ್ಯ ಎಂದು ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *