ಪುತ್ತೂರು: ಖಾಸಗಿ ಜಮೀನಿನಲ್ಲಿ ಮನೆ ನಿರ್ಮಿಸಿ ಜೀವನ ಸಾಗಿಸುತ್ತಿದ್ದ ವೃದ್ಧ ದಂಪತಿಯ ಮನೆ ಏಕಾಏಕಿ ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ, ನ್ಯಾಯಕ್ಕಾಗಿ ಒತ್ತಾಯಿಸಿ ಸಂತ್ರಸ್ತ ವೃದ್ಧ ದಂಪತಿ ಮತ್ತೆ ಧರಣಿಗೆ ಕುಳಿತ ಘಟನೆ ಪುತ್ತೂರಿನಲ್ಲಿ ನಡೆದಿದೆ.




ಮುತ್ತುಸ್ವಾಮಿ ಹಾಗೂ ರಾದಮ್ಮ ಎಂಬ ವೃದ್ಧ ದಂಪತಿ ಪುತ್ತೂರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಕ್ರಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವೃದ್ಧ ದಂಪತಿಗೆ ವ್ಯಕ್ತಿಯೊಬ್ಬರು ತಮ್ಮ ಜಾಗದಲ್ಲಿ ಮನೆ ಕಟ್ಟಿ ವಾಸಿಸಲು ಅವಕಾಶ ನೀಡಿದ್ದರು. ಆದರೆ ಸುಮಾರು ಒಂದು ವರ್ಷದ ಹಿಂದೆ, ಜಾಗಕ್ಕೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ಮನೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಪಂಚಾಯತ್ ಅಧಿಕಾರಿಗಳು ಯಾವುದೇ ಪೂರ್ವ ಮಾಹಿತಿ ನೀಡದೆ ಮನೆ ತೆರವುಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಈ ಕ್ರಮವನ್ನು ಖಂಡಿಸಿ ವೃದ್ಧ ದಂಪತಿ ಡಿಸೆಂಬರ್ 22ರಂದು ಕೂಡ ಧರಣಿಗೆ ಕುಳಿತಿದ್ದರು. ಆ ಸಂದರ್ಭದಲ್ಲಿ ಪುತ್ತೂರು ತಹಶೀಲ್ದಾರ್ ಅವರು ಒಂದು ವಾರದೊಳಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಲು ಇನ್ನೂ ಎರಡು ದಿನ ಬಾಕಿ ಇರುವ ಮೊದಲೇ, ಯಾವುದೇ ಸ್ಪಷ್ಟ ಪರಿಹಾರ ಸಿಗದ ಕಾರಣ ಮತ್ತೆ ಧರಣಿ ನಡೆಸಬೇಕಾಯಿತು ಎಂದು ವೃದ್ಧ ದಂಪತಿ ಆರೋಪಿಸಿದ್ದಾರೆ.



ಧರಣಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸಂತ್ರಸ್ತರನ್ನು ಮನವೊಲಿಸಲು ಯತ್ನಿಸಿದರೂ, ನ್ಯಾಯ ದೊರಕುವ ತನಕ ಧರಣಿ ಮುಂದುವರಿಸುವುದಾಗಿ ವೃದ್ಧ ದಂಪತಿ ಪಟ್ಟು ಹಿಡಿದಿದ್ದಾರೆ.
ಈ ಧರಣಿ ನೀತಿ ತಂಡದ ಜಯಂತ್ ಟಿ. ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಪಂಚಾಯತ್ ಅಧಿಕಾರಿಗಳ ಅಜಾಗರೂಕ ಕ್ರಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತ ವೃದ್ಧ ದಂಪತಿಗೆ ತಕ್ಷಣ ನ್ಯಾಯ ಒದಗಿಸಬೇಕು ಹಾಗೂ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.


