ಬೆಂಗಳೂರು: ಕನ್ನಡ ಹಾಗೂ ತಮಿಳು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದ ನಟಿ ನಂದಿನಿ ಸಿ.ಎಂ. ಅವರು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಾಸಂದ್ರದಲ್ಲಿ ನಡೆದಿದೆ.

ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ನಂದಿನಿ, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡ ಕಿರುತೆರೆಯಲ್ಲಿ ‘ಜೀವ ಹೂವಾಗಿದೆ’, ‘ಸಂಘರ್ಷ’, ‘ಮದುಮಗಳು’, ‘ನೀನಾದೆ ನಾ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದರು.

ಇದಲ್ಲದೆ ತಮಿಳು ಕಿರುತೆರೆಯಲ್ಲೂ ನಂದಿನಿ ತಮ್ಮದೇ ಛಾಪು ಮೂಡಿಸಿದ್ದರು. ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ಕನಕ ಹಾಗೂ ದುರ್ಗ ಎಂಬ ದ್ವಿಪಾತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದರು. ಈ ಪಾತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವು.
ನಂದಿನಿ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಂದಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ನಂದಿನಿ ಅವರ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಅವರು ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆಯ ನಿಧನದ ನಂತರ ಅವರ ಶಿಕ್ಷಕ ವೃತ್ತಿಯನ್ನು ತಾವು ಮುಂದುವರಿಸಬೇಕು ಎಂಬ ಕುಟುಂಬದ ಒತ್ತಡವಿತ್ತು ಎನ್ನಲಾಗಿದ್ದು, ಆದರೆ ಶಿಕ್ಷಕ ವೃತ್ತಿಯ ಮೇಲಿನ ಆಸಕ್ತಿ ನಂದಿನಿಗೆ ಇರಲಿಲ್ಲ ಎಂಬ ಮಾಹಿತಿ ಹೊರಬಂದಿದೆ.
ಘಟನೆಯ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಕಾರಣವಾದ ಎಲ್ಲ ಅಂಶಗಳ ಬಗ್ಗೆ ತನಿಖೆ ಮುಂದುವರಿದಿದೆ.
ಕಿರುತೆರೆ ಲೋಕದಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದ ನಂದಿನಿ ಅವರ ಅಕಾಲಿಕ ನಿಧನವು ಅಭಿಮಾನಿಗಳು ಹಾಗೂ ಕಲಾವಿದ ವಲಯದಲ್ಲಿ ತೀವ್ರ ಆಘಾತ ಉಂಟುಮಾಡಿದೆ.

Leave a Reply

Your email address will not be published. Required fields are marked *