ಮಗ ತಾರಿಕ್ ಮರಳಿದ ಕೆಲವೇ ದಿನಗಳಲ್ಲಿ ಬಿಎನ್‌ಪಿ ನಾಯಕಿಯ ಉಸಿರು ನಿಂತಿತು

ಢಾಕಾ: ತೀವ್ರ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ನೆರೆಯ ಬಾಂಗ್ಲಾದೇಶಕ್ಕೆ ಮತ್ತೊಂದು ಆಘಾತ ಎದುರಾಗಿದೆ. ದೇಶದ ಪ್ರಥಮ ಮಹಿಳಾ ಪ್ರಧಾನಿ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕಿ ಖಲೀದಾ ಜಿಯಾ ಅವರು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖಲೀದಾ ಜಿಯಾ, ಢಾಕಾದ ಎವರ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಅವರ ಪುತ್ರ ತಾರಿಕ್ ರಹಮಾನ್ ಬಾಂಗ್ಲಾದೇಶಕ್ಕೆ ಮರಳಿದ ಕೆಲವೇ ದಿನಗಳಲ್ಲಿ, ಮಾಜಿ ಪ್ರಧಾನಿಯು ಕೊನೆಯುಸಿರೆಳೆದಿದ್ದಾರೆ ಎಂದು ಬಿಎನ್‌ಪಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಖಲೀದಾ ಜಿಯಾ ಅವರನ್ನು ನವೆಂಬರ್ 23ರಂದು ಎವರ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 36 ದಿನಗಳಿಂದ ವೈದ್ಯರ ತಂಡ ತೀವ್ರ ಚಿಕಿತ್ಸೆ ನೀಡುತ್ತಿದ್ದರೂ, ಆರೋಗ್ಯದಲ್ಲಿ ಸುಧಾರಣೆ ಕಾಣಿಸಿರಲಿಲ್ಲ. ಅಂತಿಮವಾಗಿ ಡಿಸೆಂಬರ್ 30, ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಖಲೀದಾ ಜಿಯಾ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದು, ಪ್ರಧಾನಿ ಸ್ಥಾನವನ್ನು ಹಲವು ಬಾರಿ ಅಲಂಕರಿಸಿದ್ದರು. ಅವರ ನಿಧನವು ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ಗಂಭೀರ ಶೂನ್ಯವನ್ನು ಸೃಷ್ಟಿಸಿದ್ದು, ದೇಶದಾದ್ಯಂತ ಶೋಕದ ವಾತಾವರಣ ಆವರಿಸಿದೆ.

Leave a Reply

Your email address will not be published. Required fields are marked *