ದಕ್ಷಿಣ ಕನ್ನಡ: ಜಿಲ್ಲೆಯ ಕೃಷಿಕರಿಗೆ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ, ವಿಶೇಷವಾಗಿ ಕಾಡಾನೆಗಳ ಉಪಟಳ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಕಾಡಾನೆಗಳಿಂದ ತಮ್ಮ ಕೃಷಿಯನ್ನು ಉಳಿಸುವ ಜೊತೆಗೆ ಪ್ರಾಣರಕ್ಷಣೆಯನ್ನೂ ಮಾಡಿಕೊಳ್ಳಬೇಕಾದ ಸಂಕಷ್ಟಕರ ಪರಿಸ್ಥಿತಿ ಕೃಷಿಕರನ್ನು ಎದುರಿಸುತ್ತಿದೆ. ಅದರಲ್ಲೂ ಪಕ್ಕದ ಕೇರಳ ರಾಜ್ಯದಿಂದ ಆಗಮಿಸುವ ಆನೆಗಳ ಸಂಖ್ಯೆ ಹಾಗೂ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಜಿಲ್ಲೆಯ ಅರಣ್ಯಂಚಿನಲ್ಲಿರುವ ಬೆಳ್ತಂಗಡಿ, ಕಡಬ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಅಂಕಿ ಅಂಶಗಳ ಪ್ರಕಾರ ನಾಲ್ಕೈದು ವರ್ಷಗಳ ಹಿಂದೆ ಜಿಲ್ಲೆಯದ್ದೇ ಎಂದು ಗುರುತಿಸಲ್ಪಟ್ಟ ಆನೆಗಳ ಸಂಖ್ಯೆ ಕೇವಲ 20ರಷ್ಟಿದ್ದರೆ, ಕಳೆದ ಎರಡು ವರ್ಷಗಳಲ್ಲಿ ಈ ಸಂಖ್ಯೆ 100 ಗಡಿಯನ್ನು ದಾಟಿದೆ. ಈ ಹೆಚ್ಚಳಕ್ಕೆ ಪ್ರಮುಖ ಕಾರಣ ಕೇರಳ ರಾಜ್ಯ ಹಾಗೂ ಗಡಿ ಜಿಲ್ಲೆಗಳಿಂದ ದಕ್ಷಿಣ ಕನ್ನಡಕ್ಕೆ ವಲಸೆ ಬರುವ ಆನೆಗಳೇ ಎನ್ನಲಾಗಿದೆ.
ಕೇವಲ ಕೇರಳ ರಾಜ್ಯದಿಂದಲೇ ಸುಮಾರು 60 ಶೇಕಡಾ ಆನೆಗಳು ಜಿಲ್ಲೆಗೆ ನುಗ್ಗಿ ಕೃಷಿಭೂಮಿಗಳಿಗೆ ಭಾರೀ ಹಾನಿ ಮಾಡುತ್ತಿವೆ. ಮಂಡೆಗೋಲು ಅರಣ್ಯದಿಂದ ಪಯಸ್ವಿನಿ ನದಿಯನ್ನು ದಾಟಿ ಮರ್ಕಂಜ, ಅರಂತೋಡು, ಸಂಪಾಜೆ, ಪಾಣಾಜೆ, ಪೆರ್ಲಂಪ್ಪಾಡಿ ಮೊದಲಾದ ರಕ್ಷಿತಾರಣ್ಯ ಮಾರ್ಗವಾಗಿ ಈ ಆನೆಗಳು ಕಾಡಂಚಿನ ಕೃಷಿಭೂಮಿಗಳಿಗೆ ನುಗ್ಗುತ್ತಿವೆ. ಕೃಷಿತೋಟಗಳಲ್ಲಿ ಅಳವಡಿಸಿದ ನೀರಿನ ಪೈಪ್‌ಗಳನ್ನು ಒಡೆದು ಹಾಕಿ ಅಪಾರ ನಷ್ಟಕ್ಕೆ ಕಾರಣವಾಗುತ್ತಿದ್ದು, ಜನರ ಮೇಲೂ ದಾಳಿ ನಡೆಸಲು ಮುಂದಾಗುತ್ತಿರುವುದು ಆತಂಕ ಮೂಡಿಸಿದೆ. ಪರಿಣಾಮ ಕೃಷಿಕರಿಗೆ ಬೆಳೆ ನಷ್ಟದ ಜೊತೆಗೆ ಜೀವಭೀತಿಯೂ ಎದುರಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರೈತ ಮುಖಂಡ ಸುನೀಲ್ ಬೋರ್ಕರ್, “ಆನೆಗಳು ಜನವಸತಿ ಪ್ರದೇಶಗಳಿಗೆ ಬರೋದನ್ನು ತಡೆಯಲು ರಾಜ್ಯ ಸರಕಾರ ಕಳೆದ ಬಜೆಟ್‌ನಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸುವುದಾಗಿ ಘೋಷಣೆ ಮಾಡಿತ್ತು. ಆದರೆ ಆ ಘೋಷಣೆ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ರ್ಯಾಪಿಡ್ ರೆಸ್ಕ್ಯೂ ಫೋರ್ಸ್ ರಚಿಸಬೇಕು. ಆನೆ ದಾಳಿಯಿಂದ ಹಾನಿಯಾದವರಿಗೆ ಘೋಷಿತ 4 ಕೋಟಿ ರೂ. ಪರಿಹಾರವನ್ನು ಶೀಘ್ರ ಬಿಡುಗಡೆಗೊಳಿಸಬೇಕು ಹಾಗೂ ಈವರೆಗೆ ಸಂಭವಿಸಿರುವ ಸುಮಾರು 40 ಕೋಟಿ ರೂ. ಕೃಷಿ ನಷ್ಟಕ್ಕೂ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಇನ್ನು ಕಾಡಾನೆಗಳ ಜೊತೆಗೆ ಕಾಡುಕೋಣ, ಕಾಡುಹಂದಿ, ಕಡವೆ ಮೊದಲಾದ ವನ್ಯಜೀವಿಗಳ ಹಾವಳಿಯೂ ಕೃಷಿಕರ ನಿದ್ದೆಗೆಡಿಸಿದೆ. ಸರಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಕೇರಳ ರಾಜ್ಯದ ಕೃಷಿಕರು ಮಾಡಿದಂತೆ ವನ್ಯಜೀವಿ ದಾಳಿಗೆ ಪ್ರತಿದಾಳಿ ನಡೆಸುವ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *