ಬೆಂಗಳೂರು: ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. 2024–25ನೇ ಸಾಲಿನ ಆದಾಯದ ಆಧಾರದಲ್ಲಿ ರೂಪಿಸಿದ ಈ ಪಟ್ಟಿಯಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅಗ್ರಸ್ಥಾನ ಪಡೆದುಕೊಂಡಿದೆ.





ಮುಜರಾಯಿ ಇಲಾಖೆಯ ಮಾಹಿತಿ ಪ್ರಕಾರ, 2024–25ನೇ ಸಾಲಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ 155.95 ಕೋಟಿ ರೂಪಾಯಿ ಆದಾಯ ಲಭ್ಯವಾಗಿದೆ. ಎರಡನೇ ಸ್ಥಾನದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ ಇದ್ದು, ಈ ಅವಧಿಯಲ್ಲಿ 71.93 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಮೂರನೇ ಸ್ಥಾನವನ್ನು ಮೈಸೂರಿನ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಪಡೆದಿದ್ದು, 2024–25ರಲ್ಲಿ 50.68 ಕೋಟಿ ರೂಪಾಯಿ ಆದಾಯ ದಾಖಲಾಗಿದೆ. ನಾಲ್ಕನೇ ಸ್ಥಾನದಲ್ಲಿ ಮುಂದಾರ್ತಿ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನ ಸ್ಥಾನ ಪಡೆದಿದೆ.


ಇನ್ನು ಕರ್ನಾಟಕದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ನಂಜನಗೂಡು ಶ್ರೀಕಂಟೇಶ್ವರ ದೇವಸ್ಥಾನ ಐದನೇ ಸ್ಥಾನದಲ್ಲಿದ್ದು, 36.12 ಕೋಟಿ ರೂಪಾಯಿ ಆದಾಯ ಗಳಿಸಿದೆ. ಸವದತ್ತಿ ಶ್ರೀ ಎಲ್ಲಮ್ಮ ದೇವಸ್ಥಾನವು 29.95 ಕೋಟಿ ರೂಪಾಯಿ ಆದಾಯದೊಂದಿಗೆ ನಂತರದ ಸ್ಥಾನದಲ್ಲಿದೆ.
ರಾಜ್ಯದ ಧಾರ್ಮಿಕ ಪ್ರವಾಸೋದ್ಯಮ ಹಾಗೂ ಭಕ್ತರ ನಿರಂತರ ಬೆಂಬಲದಿಂದ ದೇವಾಲಯಗಳ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಈ ಪಟ್ಟಿಯಿಂದ ಸ್ಪಷ್ಟವಾಗಿದೆ.


