ಆರೋಪಿ ಕೃಷ್ಣ ಜಯ್ ರಾವ್ ಮತ್ತು ಮಗುವಿನೊಂದಿಗೆ ಸಂತ್ರಸ್ತೆಯ ತಾಯಿ

ಮಂಗಳೂರು, ಡಿ.30:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಪುತ್ರನ ವಿರುದ್ಧದ ವಂಚನೆ ಹಾಗೂ ಲೈಂಗಿಕ ಶೋಷಣೆಯ ಆರೋಪದ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಶಿಶು ಜನಿಸಿ ಆರು ತಿಂಗಳು ಕಳೆದರೂ ಸಂತ್ರಸ್ತೆಗೆ ನ್ಯಾಯ ಸಿಗದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಪುತ್ತೂರಿನ ಬಿಜೆಪಿ ಮುಖಂಡ ಜಗನ್ ನಿವಾಸ ರಾವ್ ಅವರ ಪುತ್ರ ಕೃಷ್ಣ ಜಯ ರಾವ್, ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯಾಗಿಸಿದ್ದಾನೆ ಎಂಬ ಆರೋಪ ಪ್ರಕರಣ ಇದೀಗ ಮತ್ತಷ್ಟು ಜಟಿಲವಾಗಿದೆ. ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ ಬಳಿಕವೂ ಆರೋಪಿ ಮದುವೆಗೆ ಮುಂದಾಗದೆ ಇರುವುದರಿಂದ ಕುಟುಂಬ ಕಾನೂನು ಹೋರಾಟದ ದಾರಿಯಲ್ಲೇ ಸಾಗಬೇಕಾದ ಅನಿವಾರ್ಯತೆಗೆ ತಲುಪಿದೆ.

ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ವರದಿಯಲ್ಲಿ ಕೃಷ್ಣ ಜಯ ರಾವ್ ಮಗುವಿನ ತಂದೆ ಎಂಬುದು ದೃಢಪಟ್ಟಿದೆ. ಆದರೂ ಆರೋಪಿ ಮದುವೆಗೆ ನಿರಾಕರಿಸುತ್ತಿರುವುದು ಸಂತ್ರಸ್ತೆ ಹಾಗೂ ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಸಂಧಾನ ಯತ್ನ ವಿಫಲ
ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕೆಲವು ಪ್ರಮುಖ ನಾಯಕರು, ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಲವರು ಸಂಧಾನಕ್ಕೆ ಯತ್ನಿಸಿದರೂ ಅದು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ “ಕಾನೂನು ಹೋರಾಟವೇ ನಮ್ಮ ಮುಂದೆ ಉಳಿದಿರುವ ಏಕೈಕ ದಾರಿ” ಎಂದು ಸಂತ್ರಸ್ತೆಯ ಕುಟುಂಬ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ
ಶಾಲಾ ದಿನಗಳಿಂದ ಪರಿಚಯವಿದ್ದ ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ ಎಂಬ ಆರೋಪ ಸುಮಾರು 7–8 ತಿಂಗಳ ಹಿಂದೆ ಕೇಳಿಬಂದಿತ್ತು. ಆರಂಭದಲ್ಲಿ ಮದುವೆಗೆ ನಿರಾಕರಿಸಿದ್ದ ಆರೋಪಿ, ಒತ್ತಾಯದ ಮೇರೆಗೆ ಒಪ್ಪಿಕೊಂಡಿದ್ದರೂ, 21 ವರ್ಷ ವಯಸ್ಸು ಪೂರ್ಣವಾಗಿಲ್ಲ ಎಂಬ ಕಾರಣ ನೀಡಿ ನಂತರ ಮದುವೆ ಮಾಡುವುದಾಗಿ ತಂದೆ ಭರವಸೆ ನೀಡಿದ್ದರು. ಆದರೆ ಮಗು ಜನಿಸಿದ ಬಳಿಕ ಮದುವೆಗೆ ಸಂಪೂರ್ಣವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು. ಆರೋಪಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಮಗು ನನ್ನದಲ್ಲ ಎಂದು ಆರೋಪಿ ಹೇಳಿದ ಹಿನ್ನೆಲೆಯಲ್ಲಿ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರಿನ ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಮಗುವಿನ ತಂದೆ ಕೃಷ್ಣ ಜಯ ರಾವ್ ಎಂಬುದು ದೃಢಪಟ್ಟಿದೆ. ಈ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಸುದ್ದಿಯಾಗಿತ್ತು. ಬಳಿಕ ಬಿಜೆಪಿ ಆರೋಪಿಯ ತಂದೆ ಜಗನ್ ನಿವಾಸ ರಾವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.
“ಮಗುವಿಗೆ ತಂದೆ, ನನಗೆ ಪತಿ ಸಿಕ್ಕರೆ ಸಾಕು”
“ಮಗುವಿಗೆ ತಂದೆ ಮತ್ತು ನನಗೆ ಗಂಡ ಸಿಕ್ಕರೆ ಸಾಕು. ಈಗಲೂ ಮದುವೆಗೆ ಸಿದ್ಧಳಿದ್ದೇನೆ. ಆದರೆ ಸಂಧಾನ ವಿಫಲವಾಗಿದೆ. ಮುಂದೆ ಕೋರ್ಟ್ ನೀಡುವ ತೀರ್ಪನ್ನೇ ಸ್ವೀಕರಿಸುತ್ತೇವೆ” ಎಂದು ಸಂತ್ರಸ್ತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಹಣದ ಆಮಿಷ ತೋರಿಸಲಾದರೂ ನ್ಯಾಯ ಸಿಗಲಿಲ್ಲ ಎಂದು ಸಂತ್ರಸ್ತೆಯ ತಾಯಿಯೂ ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *