ಚಿಕ್ಕಬಳ್ಳಾಪುರ: ಬೆಂಗಳೂರಿಗರ ಸ್ವರ್ಗ ಎಂದು ಖ್ಯಾತಿ ಗಳಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಹೊಸ ವರ್ಷದ ಹಿನ್ನೆಲೆ ಸಂಭ್ರಮಾಚರಣೆಗಾಗಿ ಕೆಲವರು ಡಿಸೆಂಬರ್ 31ರಂದು ನಂದಿ ಗಿರಿಧಾಮದತ್ತ ಬರಲು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ.
ಆದರೆ ಪ್ರತಿ ವರ್ಷದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಅಹಿತಕರ ಘಟನೆಗಳು ನಡೆದಂತೆ ಎಚ್ಚರಿಕೆ ವಹಿಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದೆ.





ನಂದಿ ಬೆಟ್ಟಕ್ಕೆ ಡಿಸೆಂಬರ್ 31ರಂದು ಮಧ್ಯಾಹ್ನ 2 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 10 ಗಂಟೆಯವರೆಗೂ ಪ್ರವಾಸಿಗರ ಪ್ರವೇಶ ನಿಷೇಧಿಸಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ. ಆದರೆ, ನಂದಿ ಬೆಟ್ಟದ ಮೇಲಿರುವ ಹೋಟೆಲ್ಗಳಲ್ಲಿ ಮುಂಗಡವಾಗಿ ರೂಮ್ ಬುಕಿಂಗ್ ಮಾಡಿರುವ ಪ್ರವಾಸಿಗರಿಗೆ ಮಾತ್ರವೇ ವಿನಾಯತಿ ನೀಡಲಾಗಿದೆ. ಜನವರಿ 1ರಂದು ಬೆಳಿಗ್ಗೆ 10 ಗಂಟೆಯ ನಂತರ ನಂದಿ ಗಿರಿಧಾಮಕ್ಕೆ ಎಂದಿನಂತೆ ಮುಕ್ತ ಪ್ರವೇಶ ಇರಲಿದೆ.


ಟ್ರೆಕಿಂಗ್ಗೆ ನಿರ್ಬಂಧ
ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿದರೆ, ಈ ಭಾಗದ ಹೋಟೆಲ್, ರೆಸಾರ್ಟ್ಗಳಲ್ಲಿ ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರವೇ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಾದ ಕೈವಾರ, ಸ್ಕಂದಗಿರಿ ಬೆಟ್ಟಗಳಲ್ಲಿ ಚಾರಣ ಕೂಡ ರದ್ದು ಮಾಡಲಾಗಿದೆ ಮುಂಜಾಗ್ರತೆಯ ಕ್ರಮವಾಗಿ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೈವಾರ ಬೆಟ್ಟ ಮತ್ತು ಸ್ಕಂದಗಿರಿ ಬೆಟ್ಟಕ್ಕೆ ಟ್ರೆಂಕಿಂಗ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿ ಹೊಸ ವರ್ಷಾಚರಣೆ ನೆಪದಲ್ಲಿ ಮದ್ಯಪಾನ ಮಾಡಿ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಕಾರಣ ಈ ಭಾಗಗಳಲ್ಲಿ ಟ್ರೆಕಿಂಗ್ ರದ್ದುಗೊಳಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಹೋಂ ಸ್ಟೇ, ರೆಸಾರ್ಟ್ಗಳಿಗೆ ಖಡಕ್ ಎಚ್ಚರಿಕೆ
ಸಾಮಾನ್ಯವಾಗಿ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈಗ ರೆಸಾರ್ಟ್ ಹಾಗೂ ಹೋಂಸ್ಟೇಗಳ ಸಂಖ್ಯೆ ಕೂಡ ಹೆಚ್ಚಾಗಿರುವ ಹಿನ್ನೆಲೆ ಹೊಸ ವರ್ಷದ ಸಂಭ್ರಮಾಚರಣೆಗೆ ಜನ ಇಲ್ಲಿಗೆ ಬರುತ್ತಾರೆ. ಹೀಗಾಗಿ ಎಲ್ಲ ಹೋಂ ಸ್ಟೇ ಮಾಲೀಕರ ಜೊತೆ ಪೊಲೀಸರು ಸಭೆ ನಡೆಸಿ, ಹೊಸ ವರ್ಷಾಚರಣೆಗೆ ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ಬುಧವಾರ ಮಧ್ಯರಾತ್ರಿ 12 ಗಂಟೆಯ ನಂತರ ಎಲ್ಲಿಯೂ ಸಂಭ್ರಮಾಚರಣೆ ಮಾಡಬಾರದು.
ಪ್ರವಾಸಿಗರು ಹೋಂ ಸ್ಟೇಗಳಲ್ಲೇ ಸಂಭ್ರಮಾಚರಣೆ ಮಾಡಬೇಕು. ರಾತ್ರಿ 10 ಗಂಟೆ ನಂತರ ಡಿಜೆ ಇನ್ನಿತರೆ ಧ್ವನಿವರ್ಧಕಗಳನ್ನು ಬಳಸಬಾರದು. ನಿಯಮಗಳನ್ನು ಉಲ್ಲಂಘಿಸಿ ಪಾರ್ಟಿ ಹೆಸರಿನಲ್ಲಿ ಯಾವುದೇ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಟಾಕಿಗಳನ್ನು ಸಿಡಿಸುವಂತಿಲ್ಲ. ಅತಿವೇಗ, ಅಜಾಗರೂಕತೆಯಿಂದ ವಾಹನ ಚಲಾಯಿಸಬಾರದು. ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸಬಾರದು. ಮೋಜಿಗಾಗಿ ತುರ್ತು ಕರೆಗಳಿಗೆ ಸಂಪರ್ಕಿಸಬಾರದು. ಅನವಶ್ಯಕವಾಗಿ ಗುಂಪುಗೂಡಬಾರದು ಎಂದು ಸ್ಥಳೀಯ ಆಡಳಿತಗಳು ಎಚ್ಚರಿಕೆ ನೀಡಿವೆ.


