ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಪಸ್ಯಾ ಎಸ್. ನಾಯಕ್ ಅವರು ರಾಷ್ಟ್ರಮಟ್ಟದ 69ನೇ ನೆಟ್ಬಾಲ್ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.



69ನೇ ರಾಷ್ಟ್ರಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವು ಫೈನಲ್ ಪಂದ್ಯದಲ್ಲಿ ಕೇರಳ ತಂಡವನ್ನು 4 ಅಂಕಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ವಿಜಯದಲ್ಲಿ ಗ್ರಾಮೀಣ ಪ್ರದೇಶವಾದ ಕುಕ್ಕೆಯ ವಿದ್ಯಾರ್ಥಿನಿ ತಪಸ್ಯಾ ಎಸ್. ನಾಯಕ್ ಅವರ ಪಾತ್ರ ಗಮನಾರ್ಹವಾಗಿದ್ದು, ಕಾಲೇಜಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕವನ್ನು ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ತಪಸ್ಯಾ ಅವರು ಸುಬ್ರಹ್ಮಣ್ಯದ ಎಸ್ಎಸ್ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹಾಗೂ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಅವರ ಸುಪುತ್ರಿಯಾಗಿದ್ದಾರೆ. ವಿದ್ಯಾರ್ಥಿನಿಗೆ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್ ಅವರು ತರಬೇತಿ ನೀಡಿದ್ದರು.


ವಿದ್ಯಾರ್ಥಿನಿಯ ಈ ಸಾಧನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ ಅಭಿನಂದಿಸಿದ್ದಾರೆ.
ಭವ್ಯ ಮೆರವಣಿಗೆಗೆ ಸಿದ್ಧತೆ
ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ತಂಡದ ಸದಸ್ಯರು ಒಂದು ವಾರಗಳ ಕಾಲ ವಿಶೇಷ ತರಬೇತಿಯನ್ನು ಸುಬ್ರಹ್ಮಣ್ಯದ ಎಸ್ಎಸ್ಪಿಯು ಕಾಲೇಜಿನಲ್ಲಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ವಿಜೇತ ಕರ್ನಾಟಕ ತಂಡವನ್ನು ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಿ ಗೌರವಿಸಿ ಸನ್ಮಾನಿಸುವ ಯೋಜನೆಯನ್ನು ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘ ಹಾಗೂ ಶಿಕ್ಷಕ–ರಕ್ಷಕ ಸಂಘ ರೂಪಿಸಿದೆ.


