ಪುತ್ತೂರು : ಕಸಬ ನಿವಾಸಿಯಾದ ನಿವೃತ್ತ ಪ್ರಾಂಶುಪಾಲ ಎ.ವಿ. ನಾರಾಯಣ (84) ಅವರ ಮನೆಯಲ್ಲಿ ನಡೆದ ಮಧ್ಯರಾತ್ರಿ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

ಡಿಸೆಂಬರ್ 17, 2025ರ ಮಧ್ಯರಾತ್ರಿ ಹೆಲ್ಮೆಟ್ ಧರಿಸಿ ಮುಖಚಹರೆ ಮರೆಮಾಚಿಕೊಂಡಿದ್ದ ಇಬ್ಬರು ಅಪರಿಚಿತರು ಪಿರ್ಯಾದಿದಾರರ ಮನೆಯ ಹಿಂಭಾಗಿಲಿನಿಂದ ಒಳನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳು ನಾರಾಯಣ ಅವರಿಗೂ ಅವರ ಪತ್ನಿಗೂ ಬೆದರಿಕೆ ಹಾಕಿದ್ದು, ನಡೆದ ತಳ್ಳಾಟದಲ್ಲಿ ಪತ್ನಿಗೆ ಗಾಯವಾಗಿದೆ. ನಾರಾಯಣ ಅವರು ಜೋರಾಗಿ ಕಿರುಚಿದ ಪರಿಣಾಮ ಭಯಗೊಂಡ ಆರೋಪಿಗಳು ಯಾವುದೇ ವಸ್ತುಗಳನ್ನು ಕಳ್ಳತನ ಮಾಡದೇ ಪರಾರಿಯಾಗಿದ್ದರು.

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪುತ್ತೂರು ಮೂಡೂರು ನಿವಾಸಿಗಳಾದ ಕಾರ್ತಿಕ್ ರಾವ್ (31) ಹಾಗೂ ಅವರ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಅವರನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *