ಪುತ್ತೂರು : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (VCET) ಸಂಸ್ಥೆಗೆ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಗಳಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ (National Board of Accreditation – NBA) ಮಾನ್ಯತೆ ಲಭಿಸಿದೆ.



ಈ ಮಾನ್ಯತೆ 2022–2025 ಅವಧಿಗೆ ಮಾನ್ಯವಾಗಿದ್ದು, ಮುಂದಿನ ಪರಿಶೀಲನೆಯ ಬಳಿಕ 2026 ರಿಂದ ಡಿಸೆಂಬರ್ 2028ರವರೆಗೆ ವಿಸ್ತರಿಸಲಾಗಿದೆ. ಉನ್ನತ ಶಿಕ್ಷಣದ ಗುಣಮಟ್ಟ, ಪಠ್ಯಕ್ರಮ, ಅಧ್ಯಾಪಕರ ಸಾಮರ್ಥ್ಯ, ಮೂಲಸೌಕರ್ಯ, ವಿದ್ಯಾರ್ಥಿ ಕಲ್ಯಾಣ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಆಧರಿಸಿ NBA ಈ ಮಾನ್ಯತೆಯನ್ನು ನೀಡಿದೆ.


ಇದಕ್ಕೂ ಮುನ್ನ 2019ರಿಂದ 2022ರವರೆಗೆ ಕಾಲೇಜಿನ ಕೆಲವು ವಿಭಾಗಗಳಿಗೆ NBA ಮಾನ್ಯತೆ ದೊರೆತಿದ್ದು, ಇದೀಗ ಮತ್ತೊಮ್ಮೆ ಮಾನ್ಯತೆ ದೊರಕಿರುವುದು ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ಮತ್ತೊಂದು ಮೈಲಿಗಲ್ಲಾಗಿದೆ. ಜೊತೆಗೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (AICTE) ಮಾರ್ಗಸೂಚಿಗಳಿಗೆ ಅನುಗುಣವಾಗಿ ಶಿಕ್ಷಣ ನೀಡುತ್ತಿರುವುದನ್ನೂ ಈ ಮಾನ್ಯತೆ ದೃಢಪಡಿಸಿದೆ.
ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿಯ ಶ್ರಮಕ್ಕೆ ಇದು ಫಲವಾಗಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ತಾಂತ್ರಿಕ ಶಿಕ್ಷಣ ದೊರೆಯಲು ಇದು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




