
ಪುತ್ತೂರು : ಕಳೆದ ನಾಲ್ಕು ದಿನಗಳಿಂದ ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ವೃದ್ಧ ದಂಪತಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಮೈ ಕೊರೆಯುವ ಚಳಿಯಲ್ಲಿಯೂ ಅವರ ಸಮಸ್ಯೆಗೆ ಕನಿಷ್ಠ ಮಾನವೀಯ ದೃಷ್ಟಿಯಿಂದಲೂ ಸ್ಪಂದಿಸದ ಅಧಿಕಾರಿಗಳ ಧೋರಣೆಗೆ ದಲಿತ ಸೇವಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಧರಣಿ ನಡೆಸುತ್ತಿರುವ ಕೌಕ್ರಾಡಿ ಕಾಪಿನಬಾಗಿಲು ನಿವಾಸಿಗಳಾದ ರಾಧಮ್ಮ ಹಾಗೂ ಮುತ್ತುಸ್ವಾಮಿ ಅವರನ್ನು ಗುರುವಾರ ಭೇಟಿ ಮಾಡಿದ ದಲಿತ ಸೇವಾ ಸಮಿತಿ ಜಿಲ್ಲಾ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕ್ಕಾಡು ಮಾತನಾಡಿ, ಶ್ರೀಮಂತರು ಎಕರೆಗಟ್ಟಲೆ ಜಮೀನು ಒತ್ತುವರಿ ಮಾಡಿಕೊಂಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು, ಕೇವಲ 20 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡ ವೃದ್ಧ ದಂಪತಿಗಳ ಮನೆಯನ್ನು ನೆಲಸಮ ಮಾಡಿರುವುದು ಅತೀವ ಅನ್ಯಾಯಕರ ಎಂದು ಆರೋಪಿಸಿದರು. ಪ್ರಸ್ತುತ ವೃದ್ಧರ ಆರೋಗ್ಯದ ಹಿನ್ನಲೆಯಲ್ಲಿ ತಕ್ಷಣ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.





ಈ ಧರಣಿ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟದಲ್ಲಿ ಅತ್ಯಂತ ನೋವುಂಟು ಮಾಡುವ ವಿಚಾರವಾಗಿದೆ. ಸರ್ಕಾರಕ್ಕೆ ಈ ವೃದ್ಧ ದಂಪತಿಗಳಿಗೆ 20 ಸೆಂಟ್ಸ್ ನಿವೇಶನ ನೀಡುವುದು ದೊಡ್ಡ ವಿಷಯವಲ್ಲ. ಹಾಗಿದ್ದರೂ ಈವರೆಗೆ ನ್ಯಾಯ ಒದಗಿಸದಿರುವುದು ನಿಗೂಢವಾಗಿದೆ. ಸರ್ಕಾರ ಹಾಗೂ ಕಂದಾಯ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಇವರಿಗೆ ಬದುಕುವ ನೆಲೆಯನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು. ಧರಣಿ ಇನ್ನಷ್ಟು ದಿನ ಮುಂದುವರಿದರೆ ವೃದ್ಧರ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ಹಾಗಾದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮತಯಾಚನೆಗಾಗಿ ಈ ಮನೆಗೆ ಬಂದಿದ್ದರೂ, ಇದೀಗ ತಮ್ಮದೇ ಕ್ಷೇತ್ರದ ಈ ವೃದ್ಧ ದಂಪತಿಗಳ ನೋವು ಕೇಳಲು ಮುಂದಾಗಿಲ್ಲ ಎಂದು ಟೀಕಿಸಿದರು. ಶಾಸಕಿ ಸರ್ಕಾರ ಹಾಗೂ ಕಂದಾಯ ಇಲಾಖೆಗೆ ಒತ್ತಡ ಹೇರುವ ಮೂಲಕ ಈ ಬಡ ವೃದ್ಧರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಪುತ್ತೂರು ಅಕ್ರಮ–ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಅವರು ಮಾತನಾಡಿ, ಈ ಪ್ರಕರಣದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ತಕ್ಷಣ ಸೂಕ್ತ ಕ್ರಮ ಕೈಗೊಂಡು ಧರಣಿಯನ್ನು ಅಂತ್ಯಗೊಳಿಸಿ ಪರಿಹಾರ ಒದಗಿಸಬೇಕು ಎಂದು ಹೇಳಿದರು. ದಲಿತ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡು ಅವರು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡನೀಯವಾಗಿದ್ದು, ವೃದ್ಧ ದಂಪತಿಗಳ ವಿಚಾರದಲ್ಲಿ ತಕ್ಷಣ ನ್ಯಾಯಸಮ್ಮತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಸೇವಾ ಸಮಿತಿ ಜಿಲ್ಲಾ ಮಾಜಿ ಸಂಚಾಲಕ ಧನಂಜಯ ಬಲ್ನಾಡು, ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ತೆಂಕಿಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಲಿತ ನಾಯ್ಕ್ ಕಾರ್ಪಾಡಿ, ತಾಲೂಕು ಮಾಜಿ ಉಪಾಧ್ಯಕ್ಷ ಮನೋಹರ್ ಕೋಡಿಜಾಲು, ಜಿಲ್ಲಾ ಮಾಜಿ ಉಪಾಧ್ಯಕ್ಷ ದಾಮು ಕಲ್ಲೇಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.


