ಬೆಳ್ತಂಗಡಿ: ತಾಯಿಯ ಉತ್ತರ ಕ್ರಿಯೆ ನೆರವೇರಿದ ಕೆಲವೇ ದಿನಗಳಲ್ಲಿ ಮಗನೊಬ್ಬ ಅನಾರೋಗ್ಯದಿಂದ ಮೃತಪಟ್ಟ ದುರ್ಘಟನೆ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದಲ್ಲಿ ನಡೆದಿದೆ.


ಕರಂಬಾರು ಗ್ರಾಮದ ಕಾಜಿಮುಗೇರು ದರ್ಬೆ ನಿವಾಸಿ ಚನ್ನು (70) ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ಉತ್ತರ ಕ್ರಿಯೆ ಕಳೆದ ಮಂಗಳವಾರ ನೆರವೇರಿತ್ತು. ತಾಯಿಯ ಉತ್ತರ ಕ್ರಿಯೆಯ ಮರುದಿನವೇ ಅವರ ಪುತ್ರ ಮಹಾಬಲ (40) ಅವರು ಅಸೌಖ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ತಾಯಿ ನಿಧನಗೊಂಡ 18ನೇ ದಿನಕ್ಕೆ ಮಹಾಬಲ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.



ಒಂದರ ಬೆನ್ನಲ್ಲೇ ತಾಯಿ–ಮಗ ಇಬ್ಬರ ನಿಧನದಿಂದ ಕುಟುಂಬದ ಮೇಲೆ ತೀವ್ರ ದುಃಖದ ನೆರಳು ಆವರಿಸಿದೆ. ಮೃತ ಮಹಾಬಲ ಅವರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಸಹೋದರ, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.




