ಬೆಂಗಳೂರು: ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಎದುರು ನಡೆದಿರುವ ನಿನ್ನೆಯ ಘಟನೆ ಕಾಂಗ್ರೆಸ್ ‌ ಗೂಂಡಾಗಳು ನಡೆಸಿದ ಸರ್ಕಾರಿ ಪ್ರಾಯೋಜಕತ್ವದ ಪೂರ್ವ ನಿಯೋಜಿತ ದುಷ್ಕೃತ್ಯವಾಗಿದೆ, ಸದರಿ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ಈ ಕೂಡಲೇ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಅವರು ಸೇರಿದಂತೆ ನಮ್ಮ ಪಕ್ಷದ ಪ್ರಮುಖರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸುವೆ. ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರು ಬಿ ವೈ ವಿಜಯೇಂದ್ರ ಅವರು, ಜನಾರ್ಧನ ರೆಡ್ಡಿ ಮತ್ತವರ ಕುಟುಂಬವನ್ನು ಗುರಿಯನ್ನಾಗಿಸಿಕೊಂಡು ನಡೆದಿರುವ ಈ ಘಟನೆಗೆ ಮಹರ್ಷಿ ವಾಲ್ಮೀಕಿ ಪ್ರತಿಮೆಯ ಉದ್ಘಾಟನೆಯ ಕಾರ್ಯಕ್ರಮದ ಬ್ಯಾನರ್‌ ಅಳವಡಿಸುವುದನ್ನು ನೆಪವಾಗಿಸಿಕೊಳ್ಳಲಾಗಿದೆ. ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದಿಲ್ಲ. ನಾಗರಿಕ ಸಮಾಜ ನೆಮ್ಮದಿಯಾಗಿ ಬದುಕುವ ವಾತಾವರಣವನ್ನು ವಿಚಲಿತಗೊಳಿಸಿ, ಭಯಗ್ರಸ್ಥ ನಗರವನ್ನಾಗಿಸಲು ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ದುಷ್ಕೃತ್ಯಕ್ಕೆ ಇಳಿದಂತಿದೆ.

ಜನಾರ್ದನ ರೆಡ್ಡಿಯವರು ಬಿಜೆಪಿಗೆ ಮರು ಸೇರ್ಪಡೆಯಾದನಂತರ ಸ್ಥಳೀಯವಾಗಿ ಪಕ್ಷಸಂಘಟನೆ ಪ್ರಬಲವಾಗುತ್ತಿರುವುದು, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ನಡುವಿನ ಬಾಂಧವ್ಯ ಹಿಂದಿನಂತೆ ಬೆಸೆದಿರುವುದು ರಾಜಕೀಯ ದುಷ್ಟರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ವಿಪರ್ಯಾಸವೆಂದರೆ ಸ್ಥಳೀಯ ಪೊಲೀಸ್‌ ಠಾಣೆಗಳು ಕಾಂಗ್ರೆಸ್ ‌ಕಛೇರಿಗಳಾಗಿ ಮಾರ್ಪಟ್ಟಿವೆ. ಸ್ಥಳೀಯ ಪೊಲೀಸರು ಕಾಂಗ್ರೆಸ್ ಕೈಗೊಂಬೆಯಾಗಿದ್ದಾರೆ, ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರೆ ಈ ದುಷ್ಕೃತ್ಯವನ್ನು ತಡೆಯಬಹುದಿತ್ತು.

Leave a Reply

Your email address will not be published. Required fields are marked *