ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆ ಪ್ರದೇಶದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಉಪಶಾಖೆಯಲ್ಲಿ ಉಪಶಾಖಾ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಮಣ್ಯಮ್ (30) ಎಂಬವರು ಡಿಸೆಂಬರ್ 17ರಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಅವರ ಸಹೋದರರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮಾಹಿತಿ ಪ್ರಕಾರ, ಸುಬ್ರಮಣ್ಯಮ್ ಅವರು ಬಿಸಿ ರೋಡ್‌ನಲ್ಲಿ ವಿಷ್ಣು ಎಂಬವರೊಂದಿಗೆ ಒಂದು ರೂಮಿನಲ್ಲಿ ವಾಸವಿದ್ದರು. ಡಿಸೆಂಬರ್ 17ರಂದು “ತಮ್ಮನಿಗೆ ಹುಷಾರಿಲ್ಲ, ರೂಮಿಗೆ ಹೋಗುತ್ತೇನೆ” ಎಂದು ಹೇಳಿ ಹೊರಟವರು, ನಂತರ ಎಲ್ಲಿಯೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರೂಮ್‌ಮೇಟ್ ವಿಷ್ಣು ಅವರು ಊರಿಗೆ ಹೋಗುವುದಾಗಿ ತಿಳಿಸಿ ಹೊರಟಿದ್ದರೂ, ಸುಬ್ರಮಣ್ಯಮ್ ಅವರು ಊರಿಗೆ ತಲುಪದೇ ಎಲ್ಲಿಯೂ ಕಾಣಿಸದೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರು ಹಾಗೂ ಪರಿಚಿತರಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಾಪತ್ತೆಯ ಹಿಂದೆಗೆ ಬ್ಯಾಂಕ್ ವ್ಯವಹಾರಗಳಲ್ಲಿ ಯಾವುದೇ ಲೋಪಗಳು ಅಥವಾ ಇತರ ಕಾರಣಗಳಿರುವುದೇ ಎಂಬ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *