ಈಶ್ವರಮಂಗಲ: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಜ.10ರಂದು ಈಶ್ವರಮಂಗಲದಲ್ಲಿ ನಡೆಯಲಿದೆ. ಸಂಘಕ್ಕೆ 25 ವರ್ಷ ತುಂಬುವೊಳಗಾಗಿ 20 ಶಾಖೆಗಳನ್ನು ಸ್ಥಾಪಿಸುವುದು ಹಾಗೂ ರೂ.200 ಕೋಟಿ ಠೇವಣಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಸಹಕಾರರತ್ನ ಸವಣೂರು ಸೀತಾರಾಮ ರೈ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 30,900 ಸದಸ್ಯರನ್ನು ಹೊಂದಿರುವ ಸಂಘವು ಪ್ರಸ್ತುತ ಸಾಲಿನಲ್ಲಿ ರೂ.829.88 ಕೋಟಿ ವ್ಯವಹಾರ ನಡೆಸಿ ರೂ.2.01 ಕೋಟಿ ಲಾಭಾಂಶ ಗಳಿಸಿದೆ. ಸಂಘದ ಬಳಿ ರೂ.161 ಕೋಟಿ ಠೇವಣಿ ಇದ್ದು, ರೂ.143 ಕೋಟಿ ಸಾಲ ವಿತರಿಸಲಾಗಿದೆ. ರೂ.3.44 ಕೋಟಿ ಪಾಲು ಬಂಡವಾಳ ಹೊಂದಿರುವ ಸಂಘವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಹಾಗೂ ಉತ್ತಮ ವಿವಿಧೋದ್ದೇಶ ಸಹಕಾರ ಸಂಘ ಎಂಬ ಪ್ರಶಸ್ತಿಗೂ ಪಾತ್ರವಾಗಿದೆ ಎಂದು ಹೇಳಿದರು.
ಆರಂಭದಿಂದಲೇ ‘ಎ’ ವರ್ಗದ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿರುವ ಸಂಘವು ಸದಸ್ಯರಿಗೆ ಶೇ.10ಕ್ಕಿಂತ ಹೆಚ್ಚು ಡಿವಿಡೆಂಟ್ ನೀಡಿದ ಏಕೈಕ ಸಂಘವಾಗಿದೆ. ಸಮಾಜಸೇವೆಯ ಅಂಗವಾಗಿ ಇದುವರೆಗೆ 1,545 ಮಕ್ಕಳಿಗೆ ರೂ.31.12 ಲಕ್ಷ ಮೊತ್ತದ ಉಚಿತ ಹಾಗೂ ವಿದ್ಯಾನಿಧಿ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಸಂಘವು ಈಗಾಗಲೇ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ. ಸಿರೋಡ್ ಕಲ್ಲಡ್ಕ ಹಾಗೂ ಪಾಂಡೇಶ್ವರದಲ್ಲಿ ಶಾಖೆಗಳನ್ನು ಹೊಂದಿದ್ದು, 17ನೇ ಶಾಖೆಯನ್ನು ಈಶ್ವರಮಂಗಲದ ಗಣೇಶ್ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಲೋಕಾರ್ಪಣೆಗೊಳಿಸಲಾಗುತ್ತದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದು, ಕಂಪ್ಯೂಟರ್ ಉದ್ಘಾಟನೆಯನ್ನು ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡತ್ತಾಯ ನೆರವೇರಿಸಲಿದ್ದಾರೆ. ಪ್ರಥಮ ಠೇವಣಿ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ್ ರೈ ಬಳಜ್ಜ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೌಝಿಯಾ ಇಬ್ರಾಹಿಂ ಕೆ ಹಾಗೂ ಗಣೇಶ್ ಕಾಂಪ್ಲೆಕ್ಸ್ ಮಾಲಕ ಗಣೇಶ್ ರೈ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕರಾದ ಅಶ್ವಿನ್ ಎಲ್. ಶೆಟ್ಟಿ, ಜೈರಾಜ್ ಭಂಡಾರಿ ನೊಣಾಲು, ಮಹಾಪ್ರಬಂಧಕ ವಸಂತ ಜಾಲಾಡಿ ಹಾಗೂ ಸಹಾಯಕ ಮಹಾಪ್ರಬಂಧಕ ಸುನಾದ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *