ಪುತ್ತೂರು: ಬೆಂಗಳೂರಿನಲ್ಲಿ ಬಡವರ ಮನೆಗಳನ್ನು ದ್ವಂಸಗೊಳಿಸಿ ಬುಲ್ಡೋಝರ್ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ನಗರದ ದರ್ಬೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ವಂಚನೆ: ಎಂ.ಎ ರಫೀಕ್ ಕಿಡಿ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ಎಂ.ಎ ರಫೀಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಪಂಚ ಗ್ಯಾರೆಂಟಿಗಳನ್ನು ತೋರಿಸಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯವನ್ನು ನಿರಂತರವಾಗಿ ವಂಚಿಸುತ್ತಾ ಬಂದಿದೆ. ಅಧಿಕಾರಕ್ಕೆ ಬಂದ ಮೇಲೆ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಬಡವರ ಆಸರೆಯಾಗಿದ್ದ ಮನೆಗಳನ್ನು ಧರಾಶಾಯಿಗೊಳಿಸುವ ಮೂಲಕ ಸರ್ಕಾರವು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದೆ,” ಎಂದು ಅವರು ಗುಡುಗಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು, ಉಪಾಧ್ಯಕ್ಷರಾದ ಸುಲೈಮಾನ್ ಬಿ.ಕೆ, ಕೋಶಾಧಿಕಾರಿ ಎಂ.ಎಚ್ ಸದ್ದಾಂ ಮುರ ಉಪಸ್ಥಿತರಿದ್ದರು.
ಅಲ್ಲದೆ, ಎಸ್‌ಡಿಪಿಐ ವಿಟ್ಲ ಬ್ಲಾಕ್ ಅಧ್ಯಕ್ಷ ಕಮರುದ್ದೀನ್ ಪುಣಚ, ಕಬಕ ಬ್ಲಾಕ್ ಅಧ್ಯಕ್ಷ ಸಿದ್ದೀಕ್ ಉರಿಮಜಲು, ಪುತ್ತೂರು ನಗರ ಸಮಿತಿ ಉಪಾಧ್ಯಕ್ಷ ಶಮೀರ್ ನಾಜೂಕು ಹಾಗೂ ಇತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಜೊತೆ ಕಾರ್ಯದರ್ಶಿ ರಹೀಂ ಪುತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅದ್ದು ಕೊಡಿಪ್ಪಾಡಿ ಅವರು ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *