ಪುತ್ತೂರು: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದದ ಮಾದರಿಯಲ್ಲೇ ಪುತ್ತೂರಲ್ಲೂ ಬ್ಯಾನರ್ ಸಂಬಂಧಿತ ವಿವಾದ ತಲೆದೋರಿದೆ. ಪುತ್ತೂರು ನಗರದ ಗಾಂಧಿಕಟ್ಟೆ ಬಳಿ ಅಂಬೇಡ್ಕರ್ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತ (AVSS) ವತಿಯಿಂದ ಅಳವಡಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿರುವ ಬ್ಯಾನರ್ ಅನ್ನು ಪುತ್ತೂರು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಾಳೆ ಸುಳ್ಯದ ಕೆವಿಜಿ ಪುರಭವನದಲ್ಲಿ ನಡೆಯಲಿರುವ AVSS ಸಂಘದ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ, ಪುತ್ತೂರಿನ ಗಾಂಧಿಕಟ್ಟೆ ಪ್ರದೇಶದಲ್ಲಿ ಕಾರ್ಯಕ್ರಮದ ಮಾಹಿತಿ ನೀಡುವ ಬ್ಯಾನರ್ ಅನ್ನು ಅಳವಡಿಸಲಾಗಿತ್ತು. ಈ ಬ್ಯಾನರ್‌ನಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಕೂಡ ಇದ್ದು, ಇದಕ್ಕಾಗಿ ಪುತ್ತೂರು ನಗರಸಭೆಯಿಂದ ಐದು ದಿನಗಳ ಕಾಲದ ಅಧಿಕೃತ ಅನುಮತಿಯನ್ನು ಪಡೆದಿರುವುದಾಗಿ AVSS ಸಮಿತಿ ತಿಳಿಸಿದೆ.

ಆದರೆ ಕಾರ್ಯಕ್ರಮಕ್ಕೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ, ನಗರಸಭೆ ಯಾವುದೇ ಮುನ್ಸೂಚನೆ ನೀಡದೆ ಬ್ಯಾನರ್ ಅನ್ನು ಕಿತ್ತೆಸೆದಿರುವುದು ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿದೆ. ಐದು ದಿನಗಳ ಅನುಮತಿ ಇದ್ದರೂ ಬ್ಯಾನರ್ ಅನ್ನು ಮುಂಚಿತವಾಗಿ ತೆಗೆದುಹಾಕಿರುವುದು ಅನ್ಯಾಯ ಹಾಗೂ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ ಎಂದು AVSS ಸಮಿತಿ ಆರೋಪಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ AVSS (ಅಂಬೇಡ್ಕರ್ ವಿವಿದೋದ್ಧೇಶ ಸಹಕಾರ) ಸಮಿತಿ ಪುತ್ತೂರು ನಗರಸಭೆ ವಿರುದ್ಧ ಕಿಡಿಕಾರಿದ್ದು, ಬ್ಯಾನರ್ ಅನ್ನು ತೆಗೆದುಹಾಕಿದ ಸ್ಥಳದಲ್ಲೇ ಕೂಡಲೇ ಮರುಅಳವಡಿಸುವಂತೆ ನಗರಸಭೆಗೆ ಒತ್ತಾಯಿಸಿದೆ.
ಒತ್ತಾಯಕ್ಕೆ ಸ್ಪಂದಿಸದಿದ್ದಲ್ಲಿ, ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳನ್ನು ಒಟ್ಟುಗೂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು AVSS ಸಮಿತಿ ಎಚ್ಚರಿಕೆ ನೀಡಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರಸಭೆ ಪೌರಾಯುಕ್ತ ಹಾಗೂ ಸಂಬಂಧಿತ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಕರಣ ದಾಖಲಿಸುವಂತೆ ಕೂಡ ಸಂಘಟನೆಯು ಆಗ್ರಹಿಸಿದೆ.
ಈ ವಿಚಾರದಲ್ಲಿ ಕೂಡಲೇ ಎಚ್ಚೆತ್ತುಕೊಂಡು ನ್ಯಾಯ ಒದಗಿಸಬೇಕು ಮತ್ತು ಬ್ಯಾನರ್ ಅನ್ನು ಮರುಅಳವಡಿಸಬೇಕು ಎಂದು AVSS ಸಮಿತಿ ಪುತ್ತೂರು ನಗರಸಭೆಗೆ ಒತ್ತಾಯಿಸಿದೆ.

Leave a Reply

Your email address will not be published. Required fields are marked *