ಮಂಡ್ಯ: ತಿಥಿ (Thithi) ಸಿನಿಮಾ ಖ್ಯಾತಿಯ ಸೆಂಚುರಿ ಗೌಡ (Century Gowda) ಅವರು ನಿಧನರಾಗಿದ್ದಾರೆ. ವಯೋ ಸಹಜ ಕಾರಣಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.





ಕಾಯಿಲೆಯಿಂದ ಬಳಲುತ್ತಿದ್ದ ಸೆಂಚುರಿ ಗೌಡ ಅವರನ್ನು ಕಳೆದ ಕೆಲ ದಿನಗಳಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಇಹಲೋಕ ತ್ಯಜಿಸಿದ್ದಾರೆ.
ಸುಮಾರು100ವರ್ಷ ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿ ಗೌಡ ಪಾತ್ರದಲ್ಲೇ ಅಭಿನಯಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದರು. , ತಮ್ಮ ವಿಶಿಷ್ಟ ಶೈಲಿ ಮತ್ತು ನೈಜ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಗ್ರಾಮೀಣ ಹಿನ್ನೆಲೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.


ತಿಥಿ ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಸೆಂಚುರಿ ಗೌಡ, ನಂತರ ಹಲವು ಕನ್ನಡ ಚಿತ್ರಗಳು ಮತ್ತು ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. 2015ರಲ್ಲಿ ಬಿಡುಗಡೆಯಾದ ತಿಥಿ ಸಿನಿಮಾ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತ್ತು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಂಗನಗೌಡನ ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಸೆಂಚುರಿ ಗೌಡ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


