ಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಹನುಮಾನ್ ನಗರದಲ್ಲಿರುವ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 03.01.2026ರ ಶನಿವಾರ ಸಪ್ತಶಕ್ತಿ ಸಂಗಮ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಮಾತೆಯರನ್ನು ಆರತಿ ಬೆಳಗಿ, ಅರಿಶಿನ–ಕುಂಕುಮ, ಬೆಲ್ಲ ನೀರು ನೀಡಿ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಗಣ್ಯ ಅತಿಥಿಗಳಿಂದ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ತದನಂತರ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ನಡೆಯಿತು.





ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಯನ್ನು ಮಾತಾಜಿ ಶ್ರೀಮತಿ ಪವಿತ್ರ ಎನ್. ರೈ ಅವರು ನೆರೆದಿದ್ದ ಮಾತೆಯರಿಗೆ ಹಾಡಿ ತಿಳಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಶ್ರೀಮತಿ ಅನಿತಾ ಮಾತಾಜಿ ಅವರು ಆಡಿಸಿ ಅತಿಥಿಗಳನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಡ್ಕ ಇಲ್ಲಿಯ ಸಹಶಿಕ್ಷಕಿ ಶ್ರೀಮತಿ ರಾಜೇಶ್ವರಿ ಸುವರ್ಣ ಮಾತಾಜಿಯವರು “ಕುಟುಂಬದ ಅರಿವು ಮತ್ತು ಪರಿಸರದ ಬಗ್ಗೆ ಭಾರತೀಯ ದೃಷ್ಟಿಕೋನ” ಎಂಬ ವಿಷಯದ ಕುರಿತು ಅರ್ಥಪೂರ್ಣ ಉಪನ್ಯಾಸ ನೀಡಿದರು.
ನಂತರ ಶ್ರೀಮತಿ ಶೋಭಾ ಹೆಗ್ಡೆ ಮಾತಾಜಿಯವರು ಮಾತೆಯರಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಶ್ರೀಮತಿ ರಾಜೇಶ್ವರಿ ಸುವರ್ಣ ಮಾತಾಜಿ ಅವರು ಬಹುಮಾನ ವಿತರಿಸಿದರು. ತದನಂತರ ವಿದ್ಯಾರ್ಥಿಗಳು ವೀರ ಮಹಿಳೆಯರ ವೇಷಭೂಷಣ ಧರಿಸಿ ಸ್ಪೂರ್ತಿದಾಯಕ ಸಂದೇಶಗಳನ್ನು ನೀಡಿದರು.


ವೇದಿಕೆಯಲ್ಲಿದ್ದ ಅತಿಥಿಗಳಿಂದ ನಾಟಿ ವೈದ್ಯೆ ಶ್ರೀಮತಿ ಜಾನಕಿ ಪಲ್ಲತಡ್ಕ ಕೊಡಿಂಬಾಳ ಇವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ದಿವ್ಯ ವಾಸುದೇವ ಗೌಡ ಅವರು ಮಹಿಳೆಯರಲ್ಲಿ ಸಪ್ತಶಕ್ತಿಯ ಅರಿವು ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿ ಸರಸ್ವತಿ ವಿದ್ಯಾಲಯ ಕಡಬದ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಎ. ಅವರು ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ಶಾಲಿನಿ ರೈ (ಆಜನ ಐತ್ತೂರು) ಹಾಗೂ ಮಾತಾಜಿ ಶ್ರೀಮತಿ ಪವಿತ್ರ ರೈ ಉಪಸ್ಥಿತರಿದ್ದರು.
ನಂತರ ಹರ್ಷಿತ ಮಾತಾಜಿ ಅವರು ಮಾತೆಯರಿಗೆ ಸಪ್ತಶಕ್ತಿ ಸಂಗಮದ ಸಂಕಲ್ಪವನ್ನು ಬೋಧಿಸಿದರು. ಮಾತಾಜಿ ಪವಿತ್ರ ರೈ ವಂದಿಸಿದರು. ಸುಮಂಗಲ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
ಒಟ್ಟು ಸುಮಾರು 120 ಮಂದಿ ಮಾತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


