ನಾಡು-ನುಡಿ ಸೇವೆ ಶ್ರೇಷ್ಠ ಕಾರ್ಯ: ಮಂಜುನಾಥ್ ಸಾಗರ್
ಪಣಜಿ, ಏ. 12: ಗೋವಾದ ಪಣಜಿಯಲ್ಲಿ ನಡೆದ 21ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವು ಭರ್ಜರಿಯಾಗಿ ಯಶಸ್ವಿಯಾಗಿ ನೆರವೇರಿತು. ಅಶೋಕ ಪ್ಲಾಜಾ ಸಭಾಂಗಣದಲ್ಲಿ ನಡೆದ ಈ ಸಮ್ಮೇಳನವನ್ನು ಹೃದಯವಾಹಿನಿ ಮಂಗಳೂರು, ಮಂಜುನಾಥ್ ಎಜುಕೇಶನ್ ಟ್ರಸ್ಟ್ (ರಿ.), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಗೋವಾ ಕದಂಬ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ್ದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಸುಬ್ರಮಣಿ (ಪಲ್ಲವಿ ಮಣಿ) ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಾಡು-ನುಡಿಗೆ ಸೇವೆ ಸಲ್ಲಿಸುವುದು ಶ್ರೇಷ್ಠ ಕಾರ್ಯವಾಗಿದ್ದು, ಅದು ವ್ಯಕ್ತಿಯನ್ನು ಪರಿಪೂರ್ಣತೆಗೆ ಕೊಂಡೊಯ್ಯುತ್ತದೆ ಎಂದರು. ಕನ್ನಡವು ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ತಿತ್ವ, ಭಾವನೆ ಮತ್ತು ಉಸಿರು ಎಂದು ಅವರು ಅಭಿಪ್ರಾಯಪಟ್ಟರು. ವಿಶ್ವದ ವಿವಿಧ ಭಾಗಗಳಲ್ಲಿ ವಾಸಿಸುವ ಕನ್ನಡಿಗರು ತಮ್ಮ ನೆಲ-ಜಲಕ್ಕೆ ಋಣಿಯಾಗಿದ್ದು, ಕನ್ನಡ ನುಡಿ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.





ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಹಾಗೂ ಎಂಎನ್ಎಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಮಹಾಜನ್ ಅವರು, ಹೃದಯವಾಹಿನಿ ಸಂಸ್ಥೆಯು ದೇಶ-ವಿದೇಶಗಳಲ್ಲಿ ಅನೇಕ ಕನ್ನಡ ಸಮ್ಮೇಳನಗಳನ್ನು ಆಯೋಜಿಸಿರುವುದು ಶ್ಲಾಘನೀಯ ಸಾಧನೆ ಎಂದು ಹೇಳಿದರು.
ಸಮ್ಮೇಳನ ಸಮಿತಿ ಸ್ಥಾಪಕಾಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 25 ವರ್ಷಗಳಿಂದ ಸಾವಿರಾರು ಕಲಾವಿದರು ಮತ್ತು ಸಾಹಿತಿಗಳಿಗೆ ವೇದಿಕೆ ಕಲ್ಪಿಸಿರುವುದು ನಮ್ಮ ಸಂಸ್ಥೆಯ ಹೆಮ್ಮೆ ಎಂದರು. ತಾಯಿನಾಡು-ನುಡಿಗೆ ಸೇವೆ ಸಲ್ಲಿಸುವುದು ಶ್ರೇಷ್ಠ ಕಾರ್ಯವೆಂದು ಅವರು ಒತ್ತಿಹೇಳಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯುನಿವರ್ಸಲ್ ಫಿಲ್ಮ್ ಮೇಕರ್ಸ್ ಕೌನ್ಸಿಲ್ ಅಧ್ಯಕ್ಷ ಎಂ.ಎ. ಮಮ್ಮಿ ಗಟ್ಟಿ ವಹಿಸಿದ್ದರು. ವಿಶೇಷ ಅತಿಥಿಗಳಾಗಿ ನಾಗರಾಜ್ ಆರ್.ಬಿ., ಶಂಸುದ್ದೀನ್, ಆಂಜನೇಯ, ಶ್ರೀನಿವಾಸ ಪೈ ಹಾಗೂ ಬಾಳೇಶ್ ಕನ್ನಡಿಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ಶೈನಿ ಗ್ರೇಸ್, ರುದ್ರಯ್ಯ ಸ್ವಾಮಿ ಹಿರೇಮಠ, ಬಸವರಾಜ್ ಎಚ್ ಮತ್ತು ಭೀಮವ್ವ ಬೆಲ್ಲದ ಬಾಗೆವಾಡಿ ಅವರಿಗೆ “ಹೃದಯವಂತರು ಪ್ರಶಸ್ತಿ–2026” ಪ್ರದಾನ ಮಾಡಲಾಯಿತು.
ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ಕಲಾವಿದರು ನೃತ್ಯ, ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮನರಂಜಿಸಿದರು. ಅಂತರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರ ನಗೆ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು.




ಉಳ್ಳಾಲ ಅಬ್ಬಕ್ಕ ರಾಣಿ ನೃತ್ಯ ರೂಪಕ, ಭರತನಾಟ್ಯ, ಜಾನಪದ ನೃತ್ಯ, ಸ್ವರ-ಕುಂಚ-ಚಿತ್ರ ಕಾರ್ಯಕ್ರಮಗಳು ಹಾಗೂ ಪಣಜಿ ಮಕ್ಕಳ ಪ್ಯಾಶನ್ ಶೋ ಕಾರ್ಯಕ್ರಮವನ್ನು ರಂಗಿನಗೊಳಿಸಿತು. ಅಮೂಲ್ಯ ಸುಜಿತ್ ಮತ್ತು ಅನು ಆನಂದ್ ಅವರ ನೃತ್ಯ ಪ್ರದರ್ಶನ ಕೂಡ ಮೆಚ್ಚುಗೆ ಪಡೆದಿತು.
ಸಮ್ಮೇಳನದ ನಿರೂಪಣೆಯನ್ನು ಪೂರ್ಣಿಮ ಎನ್ ಮತ್ತು ಸಾಗರ್ ಟಿ.ಎಸ್ ನಿರ್ವಹಿಸಿದರು.
ಬಾಕ್ಸ್ ಮ್ಯಾಟರ್:
ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ್ ಮುಂತಾದ ದಿಗ್ಗಜರು ವೇದಿಕೆಗೆ ಶೋಭೆ ತಂದಿದ್ದಾರೆ. ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಿಗೆ ಮುಂದಿನ ಅವಧಿಯಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾಗುವ ಅವಕಾಶವೂ ಇದೆ ಎಂದು ಮಂಜುನಾಥ್ ಸಾಗರ್ ತಿಳಿಸಿದ್ದಾರೆ.
