ಪುತ್ತೂರು, ಏಪ್ರಿಲ್ 18: ಡಿಜಿಟಲ್ ಪಾವತಿ ಹೆಸರಿನಲ್ಲಿ ಪೆಟ್ರೋಲ್ ಪಂಪ್ ಸಿಬ್ಬಂದಿಯನ್ನು ವಂಚಿಸಿ ₹3000 ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡು ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಅಪರಿಚಿತರು ಪರಾರಿಯಾದ ಘಟನೆ ಪುತ್ತೂರಿನ ಕೆಮ್ಮಾಯಿಯಲ್ಲಿ ನಡೆದಿದೆ.
ಕೆಮ್ಮಾಯಿ ಪ್ರದೇಶದ ಪೆಟ್ರೋಲ್ ಪಂಪ್ಗೆ ಕಾರಿನಲ್ಲಿ ಬಂದ ಆರೋಪಿಗಳು ತಮ್ಮ ವಾಹನಕ್ಕೆ ಸುಮಾರು ₹3000 ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಬಳಿಕ ಹಣ ಪಾವತಿಸುವಂತೆ ಕೇಳಿದಾಗ, ಮೊಬೈಲ್ ಮೂಲಕ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡುತ್ತಿದ್ದೇವೆ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ. ಆದರೆ ಪಾವತಿಯ ದೃಢೀಕರಣ ಸಿಗುವ ಮೊದಲು ಚಾಲಕ ತಕ್ಷಣವೇ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.






ಈ ಘಟನೆ ಬಳಿಕ ಪೆಟ್ರೋಲ್ ಪಂಪ್ ಮಾಲೀಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾರಿನ ನೋಂದಣಿ ಸಂಖ್ಯೆಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ವೇಳೆ ಬಳಸಿದ ಕಾರಿನ ನಂಬರ್ ಪ್ಲೇಟ್ ನಕಲಿ ಎಂಬುದು ಬೆಳಕಿಗೆ ಬಂದಿದೆ.
ಯೋಜಿತವಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಪೆಟ್ರೋಲ್ ಪಂಪ್ ಮಾಲೀಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.



