ಪುತ್ತೂರು; ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಭಕ್ತಾಧಿಗಳ ಸಂಗಮವಾಗುವ ಪುತ್ತೂರ್ದ ತೇರ್' ಎಂದೇ ಖ್ಯಾತಿ ಪಡೆದ ಇತಿಹಾಸ ಪ್ರಸಿದ್ದ ಮಹತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಶುಕ್ರವಾರ ರಾತ್ರಿ ಭಕ್ತಿಭಾವಗಳ ಸಂಗಮದೊಂದಿಗೆ ಅತ್ಯಂತ ವೈಭವಯುತವಾಗಿ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡರು.ಪುತ್ತೂರು ಬೆಡಿ’ ಎಂದೇ ಪ್ರಖ್ಯಾತಿ ಪಡೆದಿರುವ ಸುಡುಮದ್ದು ಪ್ರದರ್ಶನವು ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿತ್ತು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಕಣ್ಣುಗಳಿಗೆ ಈ ಬೆಳಕಿನ ರಂಗು ರಸದೌತಣ ನೀಡಿತು. ಓಂ ಶ್ರೀ ಮಹಾಲಿಂಗೇಶ್ವರ ಎಂಬ ಲಕ್ಷಾಂತರ ಮಂದಿಯ ಜಯಘೋಷ ಮುಗಿಲಾಚೆಗೆ ಮುಟ್ಟಿತು.

ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಆರಂಭದಲ್ಲಿ ಬ್ರಹ್ಮರಥಕ್ಕೆ ಸೇವೆ ನೀಡಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಏ.17ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಉತ್ಸವ, ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಂಜೆ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು. ಬಳಿಕ ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು ನಡೆದು ದೇವರು ರಥಾರೂಢರಾದರು.

ಬಳಿಕ ಸುಮಾರು 2ಗಂಟೆಗಳ ಕಾಲ ಪುತ್ತೂರು ಬೆಡಿ ಸುಡುಮದ್ದು ಪ್ರದರ್ಶನ ನಡೆದು ಈ ಬಾರಿ ಸಿಡಿಮದ್ದು ಪ್ರದರ್ಶನವನ್ನು ಕಾರ್ಕಳದ ಗುರ್ಜಿ ನಾಗರಾಜ್ ಕಿಣಿ ಫಯರ್‌ವರ್ಕ್ಸ್ ಅವರು ನಡೆಸಿದರು.ಕಳೆದ ವರ್ಷದಂತೆ ಈ ಬಾರಿಯೂ ಭಕ್ತರಿಂದಲೇ ಸೇವೆಯ ರೂಪದಲ್ಲಿ ಸುಡುಮದ್ದು ಪ್ರದರ್ಶನ ನಡೆದಿದೆ.ಈ ಬಾರಿ ರೂ.10 ಲಕ್ಷದ ಸುಡುಮದ್ದು ಪ್ರದರ್ಶನಗೊಂಡಿದೆ.ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ವರ್ಣಗಳಲ್ಲಿ ಸಿಡಿಮದ್ದು ಪ್ರದರ್ಶನ ನಡೆದಿದೆ.ಆರಂಭದಲ್ಲಿ 5 ಪ್ಯಾರಾಚೂಟ್ ಬೆಳಕು ವಿಶೇಷವಾಗಿತ್ತು.ಪ್ಯಾರಾಚೂಟ್‌ನಲ್ಲಿ ‘ಓಂ ನಮ: ಶಿವಾಯ’.
‘ಮಹತೋಭಾರ ಮಹಾಲಿಂಗೇಶ್ವರ’ ಎಂದು ವರ್ಣಗಳಲ್ಲಿ ಬರೆದಿದ್ದುದು ಗಮನ ಸೆಳೆಯಿತು.

ಜಾತ್ರೋತ್ಸವದಲ್ಲಿ ನಿತ್ಯ ಕಟ್ಟೆ ಪೂಜೆಗಳು ನಡೆಯುತ್ತಿದ್ದು, ಸಾವಿರಾರು ಮಂದಿ ಭಕ್ತರು ಕಟ್ಟೆ ಪೂಜೆ ಸೇವೆ ಮಾಡಿಸುತ್ತಿದ್ದರು.ಏ.14ರಂದು ಸೌರಮಾನ ಯುಗಾದಿ(ವಿಷು) ಸಂದರ್ಭದಲ್ಲಿ 600ಕ್ಕೂ ಮಿಕ್ಕಿ ಕಟ್ಟೆ ಪೂಜೆ ಸೇವೆಯನ್ನು ಭಕ್ತರು ಮಾಡಿದ್ದರು. ಏ.17ರಂದು ರಾತ್ರಿ 80ಕ್ಕೂ ಅಧಿಕ ಕಟ್ಟೆಪೂಜೆ ಸೇವೆ ನಡೆಯಿತು.ಬಳಿಕ ಬ್ರಹ್ಮರಥದಲ್ಲಿ ಶ್ರೀ ದೇವರು ಆರೂಢರಾದ ಬಳಿಕ 118 ಮಂದಿ ಬ್ರಹ್ಮರಥ ಪೂಜೆ ಸೇವಾರ್ಥಿಗಳಿಗೆ ಸಂಕಲ್ಪ ನೆರವೇರಿಸಲಾಯಿತು.ರಥ ಸೇವಾರ್ಥಿಗಳಿಗೆ ಕುಳಿತುಕೊಳ್ಳಲು ಪ್ರತ್ಯೇಕ ಗ್ಯಾಲೆರಿ ವ್ಯವಸ್ಥೆ ಮಾಡಲಾಗಿತ್ತು.ಸುಡು ಮದ್ದು ಪ್ರದರ್ಶನದ ಬಳಿಕ ರಥ ಸ್ವಸ್ಥಾನಕ್ಕೆ ಮರಳಿದ ಬಳಿಕ ಪ್ರಸಾದ ವಿತರಣೆ ನಡೆಯಿತು.ಬ್ರಹ್ಮರಥ ಪೂಜೆ ಸೇವೆ ಮಾಡಿಸಿದ ಭಕ್ತರಿಗೆ ರಥ ಬೀದಿಯ ಬಳಿ ನಿಲ್ಲಲು ಪ್ರತ್ಯೇಕ ಫ್ಲ್ಯಾಟ್‌ಪಾರ್ಮ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಳಿಕ ಬ್ರಹ್ಮರಥೋತ್ಸವ ನಡೆಯಿತು.
ಬಳಿಕ ಬ್ರಹ್ಮರಥದಿಂದ ಇಳಿದ ದೇವರು ಬಂಗಾರ್ ಕಾಯರ್‍ಕಟ್ಟೆ ಸವಾರಿಯ ಬಳಿಕ ಅಂಕೆತ್ತಿಮಾರ್ ಕಟ್ಟೆಯಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ದಂಡ ನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆಯ ಬಳಿಕ ದೇವಳದ ಒಳಗೆ ಪ್ರವೇಶ, ಶಯನ ನಡೆಯಿತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಸಮಿತಿ ಸದಸ್ಯರ ನೇತೃತ್ವದಲ್ಲಿ ಅತ್ಯಂತ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪುತ್ತೂರ್ದಜಾತ್ರೆ ನಡೆಯಿತು. ದೇವಳದ ಆವರಣ ವಿಶಾಲವಾಗಿ ರೂಪುಗೊಂಡ ಕಾರಣ ಭಕ್ತಾಧಿಗಳಿಗೆ ಯಾವುದೇ ಇಕ್ಕಟ್ಟಿನ ಸಮಸ್ಯೆ ಕಂಡುಬರಲಿಲ್ಲ. ದೇವಳದ ಪುಷ್ಕರಿಣಿ ಭಾಗದಲ್ಲಿದ್ದ ಮನೆಗಳ ತೆರವಿನ ಸಾಕಷ್ಟು ಸ್ಥಳ ಜಾತ್ರೆಯ ವಿಶಾಲತೆಗೆ ಕಾರಣವಾಯಿತು. ವಿಶಾಲವಾದ ವ್ಯವಸ್ಥೆಯ ಹಿನ್ನಲೆಯಲ್ಲಿ ಭಕ್ತಾಧಿಗಳಿಗೆ ನಿಲ್ಲಲು ಅನುಕೂಲ ಮಾಡಿಕೊಡಲಾಗಿತ್ತು. ಜತೆಗೆ ಇಲ್ಲಿನ ವಿಶಾಲವಾದ ಜಾಗದಲ್ಲಿ ಅನ್ನಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಜಾತ್ರೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಜಿಲ್ಲೆಗಳ ಪೊಲೀಸರ ಜೊತೆಗೆ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ ಬಂದೋಬಸ್ತ್ ನಿರತರಾಗಿದ್ದರು. ಅದರೊಂದಿಗೆ ನೂರಾರು ಪೊಲೀಸ್ ಸಿಬ್ಬಂದಿಗಳು ಮಫ್ತಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಣ್ಗಾವಲು ನಡೆಸಲಾಗಿತ್ತು. ಪುತ್ತೂರು ಕೆಎಸ್ಸಾರ್ಟಿಸಿ ವತಿಯಿಂದ ಬ್ರಹ್ಮರಥೋತ್ಸವದ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಶಾಸಕ ಅಶೋಕ್ ಕುಮಾ‌ರ್ ರೈ ದಂಪತಿ, ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಶಿವನಾಥ ರೈ ಮೇಗಿನಗುತ್ತು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ.,ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಸುಭಾಶ್ ರೈ ಬೆಳ್ಳಿಪ್ಪಾಡಿ,ಈಶ್ವರ ಬೆಡೇಕರ್, ವಿನಯ ಸುವರ್ಣ, ಕಾರ್ಯನಿರ್ವಹಣಾಕಾರಿ ಕೆ.ವಿ.ಶ್ರೀನಿವಾಸ್,ಕಚೇರಿ ವ್ಯವಸ್ಥಾಪಕ ಹರೀಶ್‌ ಶೆಟ್ಟಿ,ದೇವಳದ ಮಾಜಿ ಆಡಳಿತ ಮೊಕ್ತಸರ ಎನ್‌.ಕೆ.ಜಗನ್ನಿವಾಸ ರಾವ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಸದಸ್ಯರಾದ ಎನ್.ಕರುಣಾಕರ ರೈ ದೇರ್ಲ, ಯು.ಪಿ.ರಾಮಕೃಷ್ಣ, ಮಾಜಿ ಮೊಕೇಸರ ಚಿದಾನಂದ ಬೈಲಾಡಿ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ ಸಹಿತ ಹಲವಾರು ಮಂದಿ ತೆಂಗಿನ ಕಾಯಿ ಒಡೆದರು.ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಆಡಳಿತಾಽಕಾರಿ ದೇವಪ್ಪ ಪಿ.ಆ‌ರ್, ಉತ್ಸವ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಗೌಡ ಒಳಗುಡ್ಡೆ, ಬಲ್ನಾಡು ದೈವಸ್ಥಾನದ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ,ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,ಗ್ಯಾರಂಟಿ ಯೋಜನೆಗಳ ಅನುಷ್ಟಾನದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಹೈಕೋರ್ಟ್ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ,ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ಮುರಳೀಧರ ರೈ ಮಠಂತಬೆಟ್ಟು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *