ಪುತ್ತೂರು: ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯು)ದ ಹಾಲು ಸಂಸ್ಕರಣಾ ಕಾರ್ಖಾನೆಯನ್ನು ಪುತ್ತೂರು ಹೊರವಲಯದ ಕಟಾರದಲ್ಲಿ ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಮೇ 20ರಂದು ಸ್ಥಳ ಪರಿಶೀಲನೆ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.





ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆ ನಿರ್ಮಾಣ ವಿಚಾರದಲ್ಲಿ ಒಕ್ಕೂಟ ಕೆಲ ಕಾಲ ತಡಮಾಡುತ್ತಿದ್ದ ಹಿನ್ನೆಲೆಯಲ್ಲಿ ತಾನು ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾಗಿ ಹೇಳಿದರು. ಇದಾದ ಬಳಿಕ ಒಕ್ಕೂಟದವರು ವಾಸ್ತವ ಸ್ಥಿತಿ ಅರಿತು ಪುತ್ತೂರಿನ ನಿಗದಿತ ಜಾಗದಲ್ಲೇ ಕಾರ್ಖಾನೆ ನಿರ್ಮಿಸಲು ತೀರ್ಮಾನಿಸಿರುವುದಾಗಿ ಮಾಹಿತಿ ಲಭಿಸಿದೆ ಎಂದರು.
ಕಟಾರದಲ್ಲಿ ಈಗಾಗಲೇ 10 ಎಕರೆ ಸರಕಾರಿ ಜಮೀನು ಒಕ್ಕೂಟಕ್ಕೆ ಮಂಜೂರಾಗಿದ್ದು, ಪಕ್ಕದಲ್ಲಿರುವ 4 ಎಕರೆ ಖಾಸಗಿ ಜಾಗವನ್ನು ಖರೀದಿಸುವ ಪ್ರಕ್ರಿಯೆ ತಾಂತ್ರಿಕ ಕಾರಣಗಳಿಂದ ಇನ್ನೂ ಪೂರ್ಣಗೊಂಡಿಲ್ಲ. ಅಗತ್ಯವಿದ್ದಲ್ಲಿ ಇನ್ನೂ 7 ಎಕರೆ ಸರಕಾರಿ ಜಾಗ ನೀಡಲು ಸಿದ್ಧತೆ ಇದೆ ಎಂದು ಶಾಸಕರು ಹೇಳಿದರು.
ಪ್ರಸ್ತುತ ಮಂಗಳೂರಿನ ಕುಲಶೇಖರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಕೆಎಂಯು ಘಟಕದ 30 ವರ್ಷಗಳ ಲೀಸ್ ಅವಧಿ ಮುಗಿದಿದ್ದು, ಸೌಕರ್ಯಗಳ ಕೊರತೆ ಹಾಗೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆ ಪುತ್ತೂರಿನಲ್ಲಿ ಕಾರ್ಖಾನೆ ಸ್ಥಾಪನೆಗಾಗಿ 10 ಎಕರೆ ಜಮೀನು ಕೇವಲ 46 ಲಕ್ಷ ರೂ.ಗಳಿಗೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಇದರ ಮಧ್ಯೆ ಬಂಟ್ವಾಳದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಜಮೀನು ಖರೀದಿ ಮಾಡಿ ಕಾರ್ಖಾನೆ ನಿರ್ಮಿಸುವ ಪ್ರಯತ್ನ ನಡೆದಿದ್ದು, ಇದಕ್ಕೆ ತಾನು ತೀವ್ರ ವಿರೋಧ ವ್ಯಕ್ತಪಡಿಸಿದ್ದಾಗಿ ಶಾಸಕ ಅಶೋಕ್ ರೈ ಹೇಳಿದರು. ಕಡಿಮೆ ವೆಚ್ಚದಲ್ಲಿ ಪುತ್ತೂರಿನಲ್ಲಿ ಜಮೀನು ಲಭ್ಯವಿರುವಾಗ ಬೇರೆಡೆ ಕೋಟಿ ರೂ. ಖರ್ಚು ಮಾಡುವುದು ಸಮಂಜಸವಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ಮತ್ತು ಬಂಟ್ವಾಳ ಪ್ರದೇಶಗಳ ಹಾಲು ಪ್ರಸ್ತುತ ಮಂಗಳೂರಿಗೆ ಸಾಗಿಸಿ ಸಂಸ್ಕರಣೆ ಮಾಡಲಾಗುತ್ತಿದ್ದು, ಮತ್ತೆ ವಾಪಸು ತರಲಾಗುತ್ತಿದೆ. ಇದರಿಂದ ಅನಗತ್ಯ ಖರ್ಚು ಹೆಚ್ಚುತ್ತಿದೆ. ಪುತ್ತೂರಿನಲ್ಲಿ ಕಾರ್ಖಾನೆ ಸ್ಥಾಪನೆಯಾದರೆ ಪ್ರತೀ ಲೀಟರ್ ಹಾಲಿನ ಸಂಸ್ಕರಣೆಗೆ ಸುಮಾರು 4 ರೂ. ಉಳಿತಾಯವಾಗಲಿದ್ದು, ಇದು ಸ್ಥಳೀಯರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು.




